ರಾಮನ ಮುಗ್ಧತೆಯನ್ನು ಕಾಪಾಡಬೇಕಾಗಿದೆ: ಡಾ.ವರದರಾಜ ಚಂದ್ರಗಿರಿ

ಮಂಗಳೂರು: ಹಿಂದೆ ಮನೆಯಲ್ಲಿ ರಾಮನ ಫ್ಯಾಮಿಲಿ ಫೋಟೊ ಕಂಡು ಬರುತ್ತಿತ್ತು. ಶ್ರೀರಾಮ, ಸೀತೆ , ಲಕ್ಷ್ಮಣ ಮತ್ತು ಕೆಳಗೆ ಹನುಮಂತ ಇರುವ ಫೋಟೊ ಸಿಗುತ್ತಿತ್ತು. ಆದರೆ ಈಗ ಶ್ರೀರಾಮ ಯುದ್ಧಕ್ಕೆ ಸಜ್ಜಾಗಿರುವ ಫೋಟೊ ಕಂಡು ಬರುತ್ತದೆ. ರಾಮನ ಮುಗ್ಧತೆ ನಮಗೆ ಬೇಕು. ಈ ಮುಗ್ಧತೆಯನ್ನು ನಾವು ಕಾಪಾಡಬೇಕು. ಮಗುವಾಗುವ ರಾಮ ಈ ಕಾಲದ ಅಗತ್ಯ. ಈ ಸಂದೇಶವನ್ನು ಕುವೆಂಪು ರಾಮಾಯಣ ದರ್ಶನದುದ್ದಕ್ಕೂ ಹೇಳುತ್ತಾ ಬಂದಿದ್ದಾರೆ ಎಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಾಹಿತಿ ಡಾ. ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್‌ನ ಅಂತಿಮ ದಿನವಾಗಿರುವ ರವಿವಾರ ‘ರಾಮಾಯಣ ದರ್ಶನಂ : ಕುವೆಂಪು ಕಣ್ಣಲ್ಲಿ ರಾಮ’ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರು ಸಮನ್ವಯ , ಸರ್ವೋದಯ, ಪೂರ್ಣದೃಷ್ಠಿ ಮೂಲಸೂತ್ರವಾಗಿಟ್ಟುಕೊಂಡು ಸೂತ್ರವನ್ನು ರಾಮಾಯಣ ಕತೆಯನ್ನು ಮುಂದುವರಿಸುವ ಪ್ರಯತ್ನ ಮಾಡಿದ್ದಾರೆ. ಅನ್ನಮಯ , ಪ್ರಾಣಮಯ ಮತ್ತು ಮನೋಮಯ ಈ ಮೂರು ಶಬ್ದಗಳ ಭಾರತೀಯ ಆಧ್ಯಾತ್ಮಿಕ ಪರಂಪರೆಯಿಂದ ಕುವೆಂಪು ಪಡೆದಿದ್ದಾರೆ. ಈ ಮೂರರ ಜೊತೆಗೆ ಮತ್ತೆ ಎರಡು ಹೆಜ್ಜೆಗಳನ್ನು ವಿಜ್ಞಾನಮಯ ಮತ್ತು ಪೂರ್ಣತೆಯನ್ನು ಸೇರಿಸಿಕೊಂಡಿದ್ದಾರೆ. ಆಧ್ಮಾತ್ಮಿಕ ಸ್ವರೂಪ ಅನ್ನಮಯದಿಂದ ಪ್ರಾರಂಭಗೊಂಡು ಆನಂದಮಯ ತನಕ. ಇದೊಂದು ವಿಕಾಸ. ರಾಮನಲ್ಲೂ ವಿಕಾಸ ಕಾಣಲು ಸಾಧ್ಯ ನಮ್ಮಲ್ಲೂ ವಿಕಾಸ ಕಾಣಬೇಕು ಎಂಬ ಆಶಯದೊಂದಿಗೆ ಈ ವಿಚಾರವನ್ನು ಸ್ಪಷ್ಟಪಡಿಸಲು ರಾಮಾಯಣದ ಕತೆಯನ್ನು ವ್ಯಕ್ತಪಡಿಸಿದ್ದಾರೆ.
ಕೈಕೇಯ ದೇಶದ ಅಶ್ವಪತಿ ರಾಜನಿಗೆ ಬೇಟೆಗೆ ಹೋದ ಸಂದರ್ಭದಲ್ಲಿ ಅನಾಥ ಶಿಶು ಸಿಗುತ್ತದೆ. ಅದನ್ನು ಮನೆಗೆ ತಂದು ಆರೈಕೆ ಮಾಡುತ್ತಾನೆ. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ಮಗುವಿಗೆ ಮಂಥರೆ ಎಂಬ ಹೆಸರಿಡುತ್ತಾನೆ. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟ ಮಗುವಿಗೆ ಏಕೈಕೆ ಆಸರೆಯಾಗಿ ನಿಂತದ್ದು ಕೈಕೇಯ ಮಹಾರಾಜ. ಮುಂದೆ ಅವನಿಗೆ ಕೈಕೇಯಿ ಹುಟ್ಟಿದಾಗ ಆಕೆಯ ಆರೈಕೆಯನ್ನು ಮಾಡುತ್ತಾಳೆ. ರಾಮಾಯಣದಲ್ಲಿ ಕುವೆಂಪು ಅವರು ಮಂಥರೆಗೂ ಸ್ಥಾನ ಕೊಡುವ ಮೂಲಕ ಸರ್ವರ ವಿಕಾಸದ ಚಿಂತನೆ ನಡೆಸಿದ್ದಾರೆ. ಹಾಗೆಯೇ ಉರ್ಮಿಳೆಗೂ ಸ್ಥಾನ ನೀಡಿದ್ದಾರೆ.ರಾಮನಿಗೆ ಮದುವೆ ಸಂದರ್ಭದಲ್ಲೇ ಲಕ್ಷ್ಮಣನಿಗೂ ಮದುವೆ ಆಗಿತ್ತು. ರಾಮನ ಹೆಂಡತಿ ಸೀತೆ. ಲಕ್ಷ್ಮಣ ಹೆಂಡತಿ ಉರ್ಮಿಳಾ. ಆದರೆ ಇತರ ರಾಮಾಯಣದಲ್ಲಿ ಉರ್ಮಿಳಾ ಬಗ್ಗೆ ಹೆಚ್ಚೇನು ಇಲ್ಲ. ಕುವೆಂಪು ರಾಮಾಯಣದಲ್ಲಿ ಉರ್ಮಿಳಾ ಆಧ್ಯಾಯ ಇದೆ ಎಂದರು.
*ಕುವೆಂಪು ರಾಮಾಯಣವನ್ನು ಸೂಕ್ಷ್ಮವಾಗಿ ಗೃಹಿಸಿದ್ದಾರೆ: ಮಂಗಳೂರು ವಿವಿ ಕನ್ನಡ ವಿವಿ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಧನಂಜಯ ಕುಂಬ್ಳೆ ಮಾತನಾಡಿ ಕುವೆಂಪು ಸೃಜಿಸಿದ ರಾಮಾಯಣ ದರ್ಶನಂ ಅವರ ಕಾಲದ್ದು, ಅಂದರೆ ನಮ್ಮ ಕಾಲದ ರಾಮಾಯಣವಾಗಿದೆ. ಉತ್ತಮ ಕವಿಯಾದವನು ಪರ ಮತ್ತು ವಿರೋಧವನ್ನು ಒಂದೇ ರೀತಿಯಲ್ಲಿ ನೋಡುತ್ತಾನೆ. ಕುವೆಂಪು ವಾಸ್ತವದಲ್ಲಿ ಒಳ್ಳೆಯ ಸಹೃದಯಿ.ಇಡೀ ರಾಮಾಯಣವನ್ನು ಅವರು ಸೂಕ್ಷ್ಮವಾಗಿ ಗೃಹಿಸಿದ್ದಾರೆ. ರಾಮಾಯಣದಲ್ಲಿ ಮೌನವಾಗಿರುವ ಪಾತ್ರಗಳನ್ನು ಮಾತನಾಡಿಸಿದ್ದಾರೆ. ಕುವೆಂಪು ಅವರಿಗೆ ರಾಮನು ಸಚ್ಚಿದಾನಂದ ಸ್ವರೂಪಿ ಆಗಿದ್ದಾನೆ. ಮಗುವಾಗುವ ರಾಮ ಇಂದಿನ ಅಗತ್ಯ ಎಂದರು.
ಕಾಲಕಾಲಕ್ಕೆ ಕಾವ್ಯಗಳನ್ನು ಮಾನವೀಯಗೊಳಿಸುವ ಪ್ರಯತ್ನ ನಡೆಯುತ್ತಲೇರಬೇಕು. ವಾಲಿಯ ವಧೆಯ ಸಂದರ್ಭದಲ್ಲಿ ರಾಮನು ತಪ್ಪೊಪ್ಪಿಕೊಳ್ಳುತ್ತಾನೆ. ತಾನು ಮರೆಯಲ್ಲಿ ನಿಂತು ಬಾಣ ಬಿಟ್ಟದ್ದು ತಪಾಯ್ತು ಎಂದು ರಾಮ ಹೇಳುವಾಗ ವಾಲಿಯು ನೀನು ಸತ್ಯವಂತ. ಯಾಕೆಂದರೆ ಸೋಲುವವರ ಮುಂದೆ ಯಾರಾದರು ತಪ್ಪೊಪ್ಪಿಕೊಳ್ಳುರುಂಟೆ ಎಂದು ವಾಲಿ ಪ್ರತಿಕ್ರಿಯೆ ನೀಡುತ್ತಾನೆ ಎಂದು ಧನಂಜಯ ಕುಂಬ್ಳೆ ಬಣ್ಣಿಸಿದರು.
ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಗೋಷ್ಠಿಯನ್ನು ನಡೆಸಿಕೊಟ್ಟರು.







