ಮಂಗಳೂರು : ಎಂಸಿಸಿ ಬ್ಯಾಂಕ್‌ನ ‘ಮೈಲಿಗಲ್ಲು’ ಸಂಭ್ರಮಾಚರಣೆ

ಮಂಗಳೂರು: ಕ್ರೈಸ್ತ ಸಮುದಾಯದ ಧುರೀಣ ಪಿ.ಎಫ್.ಎಕ್ಸ್ ಸಲ್ದಾನ್ಹಾ ನೇತೃತ್ವದಲ್ಲಿ 1912ರಲ್ಲಿ ಕೇವಲ 10 ಸಾವಿರ ರೂ. ಬಂಡವಾಳದೊಂದಿಗೆ ಸೊಸೈಟಿಯಾಗಿ ಆರಂಭಗೊಂಡ ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಇದೀಗ 1 ಸಾವಿರ ಕೋ.ರೂ. ವಹಿವಾಟಿನೊಂದಿಗೆ ಸಹಕಾರಿ ಕ್ಷೇತ್ರದ ಅಗ್ರಮಾನ್ಯ ಬ್ಯಾಂಕಾಗಿ ಗುರುತಿಸಲ್ಪಟ್ಟ ಹಿನ್ನೆಲೆಯಲ್ಲಿ ರವಿವಾರ ನಗರದ ಮಿಲಾಗ್ರಿಸ್ ಹಾಲ್‌ನಲ್ಲಿ ‘ಎಂಸಿಸಿ ಬ್ಯಾಂಕ್‌ನ ಸಾಧನೆಯ ‘ಮೈಲಿಗಲ್ಲು’ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿ ರತ್ನ ಅನಿಲ್ ಲೋಬೋ ‘ಸಮಾಜದ ಕಟ್ಟಕಡೆಯ ಜನರಿಗೂ ಬ್ಯಾಂಕ್‌ನ ಸಾಲ ಸೌಲಭ್ಯ, ಯೋಜನೆಗಳು ದೊರಕಬೇಕು ಎಂಬುದು ನಮ್ಮೆಲ್ಲರ ಕನಸಾಗಿದೆ. ಅದನ್ನು ನನಸಾಗಿಸಲು ಸರ್ವ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದೇವೆ. 2018ರಲ್ಲಿ ನಾನು ಈ ಬ್ಯಾಂಕ್‌ನ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿ ಕೊಂಡಾಗ ಕೇವಲ 503 ಕೋ.ರೂ. ವ್ಯವಹಾರವಿತ್ತು. 5 ವರ್ಷದಲ್ಲಿ ಅದು 1 ಸಾವಿರಕ್ಕೇರಿರುವುದು ಸಾಹಸವೇ ಸರಿ. ಅದನ್ನು ಯಶಸ್ವಿಗೊಳಿಸುವಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಗ್ರಾಹಕರು ಅಪಾರ ಶ್ರಮ ಪಟ್ಟಿದ್ದಾರೆ. ಬ್ಯಾಂಕನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಬ್ಯಾಂಕ್‌ನ 112 ವರ್ಷಗಳ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶೇ.1.37ಕ್ಕೆ ಎನ್‌ಪಿಎ ಇಳಿಸಿ ನಿವ್ವಳ ಲಾಭ 10.38 ಕೋ.ರೂ. ದಾಖಲಿಸಿದೆ. 2002ರಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ 16 ಶಾಖೆಗಳಿತ್ತು. ಇದೀಗ ದ.ಕ. ಮತ್ತು ಉಡುಪಿ ಜೊತೆಗೆ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗೆ ಬ್ಯಾಂಕ್‌ನ ಸೇವೆಯನ್ನು ವಿಸ್ತರಿಸ ಲಾಗಿದೆ. ಪ್ರತ್ಯೇಕ ಘಟಕ ನಿರ್ಮಾಣ, ಸಹ ಮಿಲನ, ಸಮಾವೇಶ ಮತ್ತಿತರ ವಿಶೇಷ ಕಾರ್ಯಕ್ರಮಗಳ ಮೂಲಕ ಅನಿ ವಾಸಿ ಭಾರತೀಯ ಖಾತೆಗಳಿಗೆ ಚುರುಕು ಮುಟ್ಟಿಸಲಾಗುತ್ತಿದೆ ಎಂದು ಅನಿಲ್ ಲೋಬೋ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅನಿವಾಸಿ ಉದ್ಯಮಿ ಮೈಕಲ್ ಡಿಸೋಜ ಸಮುದಾಯದ ಹಿರಿಯರು ಕಟ್ಟಿ ಬೆಳೆಸಿದ ಈ ಬ್ಯಾಂಕನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಾವ ಕಾರಣಕ್ಕೂ ಈ ಬ್ಯಾಂಕನ್ನು ವಿಲೀನಗೊಳಿಸುವುದಕ್ಕೆ ಆಸ್ಪದ ನೀಡದೆ ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಹಿರಿಯ ಲೆಕ್ಕ ಪರಿಷೋಧಕ ರುಡೋಲ್ಫ್ ರೊಡ್ರಿಗಸ್ ದಿಕ್ಸೂಚಿ ಭಾಷಣಗೈದರು. ಮಿಲಾಗ್ರಿಸ್ ಚರ್ಚನ ಪ್ರಧಾನ ಗುರು ವಂ. ಬೊನವೆಂಚರ್ ನಜ್ರೆತ್, ಮಾಜಿ ಶಾಸಕರಾದ ಜೆ.ಆರ್.ಲೋಬೊ ಮತ್ತು ಐವನ್ ಡಿಸೋಜ, ಉದ್ಯಮಿ ರೋಹನ್ ಮೊಂತೇರೊ, ಸಮುದಾಯದ ನಾಯಕ ಪಿಯುಸ್ ಎಲ್.ರಾಡ್ರಿಗಸ್ ಶುಭ ಹಾರೈಸಿದರು.
ಬ್ಯಾಂಕ್‌ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಸುನಿಲ್ ಮೆನೆಜಸ್ ಉಪಸ್ಥಿತರಿದ್ದರು. ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.
*ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಸಹಕಾರ ರತ್ನ ಪ್ರಶಸ್ತಿ ವಿಜೇತರಾದ ಅನಿಲ್ ಲೋಬೊ ಅವರನ್ನು ಸನ್ಮಾನಿಸಲಾಯಿತು.
*ಉಡುಪಿ ಪಾಂಬೂರಿನ ಪಾಂಬೂರಿನ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಕಾರ್ಕಳದ ಆಯಿಶಾ ಸ್ಥಾಪಿಸಿದ ಸುರಕ್ಷಾ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಕಾಪಿಕಾಡ್‌ನ ಪ್ರಜ್ಞಾ ಚಿಣ್ಣರ ತಂಗುಧಾಮ ಸಂಸ್ಥೆಗೆ ತಲಾ 1 ಲಕ್ಷ ರೂ. ಸಹಾಯಧನ ನೀಡಿ ಗೌರವಿಸಲಾಯಿತು.
*ಭವಿಷ್ಯದ ಯೋಜನೆಗಳಾದ ಇ-ಲಾಬಿ, ಪಾಸ್ ಬುಕ್ ಕಿಯೋಸ್ಕ್, Personalized Cheque Book, ಮೈಲಿಗಲ್ಲು ಸಾಧನೆಯ ವಿಶೇಷ ಕೊಡುಗೆಗಳನ್ನು ಅನಾವರಣ ಮಾಡಲಾಯಿತು. *ಬ್ಯಾಂಕ್‌ನ ಬುಲೆಟಿನ್ ೪ನೇ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.







