ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರ; ನೂತನ ಘಟಕದ ಕಾಮಗಾರಿಯನ್ನು ಪರಿಶೀಲಿಸಿದ ಯುಟಿ ಖಾದರ್

ಉಳ್ಳಾಲ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಹತ್ತು ಹಾಸಿಗೆಗಳುಳ್ಳ ಸುಸಜ್ಜಿತ ಡಯಾಲಿಸಿಸ್ ನೂತನ ಘಟಕ ನಿರ್ಮಾಣದ ಕಾಮಗಾರಿಯನ್ನು ಕ್ಷೇತ್ರದ ಶಾಸಕರೂ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆ,ಜಿಲ್ಲಾ ಕೇಂದ್ರದಿಂದ 8 ಕಿ.ಮೀ ಅಂತರದಲ್ಲಿ ಸಮು ದಾಯ ಆರೋಗ್ಯ ಕೇಂದ್ರಗಳು ರಾಜ್ಯ ಅಥವಾ ರಾಷ್ಟ್ರದಲ್ಲೇ ಕಾಣಲು ಸಿಗುವುದಿಲ್ಲ. ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರವು ರಾಷ್ಟ್ರಕ್ಕೆ ಮಾದರಿಯಾಗಿದೆ. ನಾನು ರಾಜ್ಯದ ಆರೋಗ್ಯ ಸಚಿವನಾಗಿದ್ದಾಗ ಕ್ಯಾಬಿನೆಟ್ಟಲ್ಲಿ ಅವಕಾಶ ಇಲ್ಲದಿದ್ದರೂ ಕೇಂದ್ರದ ವಿಶೇಷ ಅನುಮತಿಯಿಂದ ಉಳ್ಳಾಲ ಸಮುದಾಯ ಆಸ್ಪತ್ರೆಯನ್ನು ಕಟ್ಟಿಸಿದ್ದೆ. ಆದರೆ ವೈದ್ಯರು, ಸಿಬ್ಬಂದಿಗಳ ಕೊರತೆಯಿಂದ ಆರೋಗ್ಯ ಕೇಂದ್ರದ ಸೇವೆಗಳಲ್ಲಿ ಕುಂಠಿತ ಕಂಡಿವೆ. ಕೆಲವೊಂದು ಉತ್ತಮ ವೈದ್ಯರು ಗಳು ಸ್ಥಳೀಯರ ಠೀಕೆ, ಠಿಪ್ಪಣಿಗಳಿಂದ ಕೆಲಸವೇ ಬೇಡವೆಂದು ಬಿಟ್ಟು ಹೋಗಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಯೆನಪೋಯ ಆಸ್ಪತ್ರೆ ಮತ್ತು ಸರಕಾರಿ ವೈದ್ಯರೂ ಜನರಿಗೆ ಉಚಿತ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ನನ್ನ ಶಾಸಕ ನಿಧಿಯಿಂದ ನೂತನ ಡಯಾಲಿಸಿಸ್ ಸೆಂಟರ್ನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ದಾನಿಗಳ ನೆರವಿನಿಂದ ಅತಿ ಶೀಘ್ರವೇ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗುವುದು. ಕೋವಿಡ್ ಸಮಯದಲ್ಲಿ ನೆನೆಗುದಿಗೆ ಬಿದ್ದಿದ್ದ ಆಕ್ಸಿಜನ್ ಘಟಕವನ್ನೂ ಉಪಯೋಗಪಡಿಸುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿ ಸಲಾಗುವುದು. ಆಸ್ಪತ್ರೆ ಆವರಣದಲ್ಲಿರುವ ಶವಾಗಾರವನ್ನೂ ಸಾರ್ವಜನಿಕರು ಬಳಸುವಂತೆ ನವೀಕರಿಸುತ್ತಿರುವುದಾಗಿ ಖಾದರ್ ಹೇಳಿದರು.







