ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಾರದೊಳಗೆ ಸಮಿತಿ ನೇಮಕ: ಡಿ.ಕೆ.ಶಿವಕುಮಾರ್

ಮಂಗಳೂರು : ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೋಡಿಕೊಳ್ಳಲು ರಾಜ್ಯ, ಜಿಲ್ಲಾ ಮತ್ತು ಪ್ರತಿಯೊಂದು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಮಿತಿಗೆ ಸದಸ್ಯರ ನೇಮಕ ಮಾಡಲಾಗುವುದು. ವಾರದೊಳಗೆ ಆದೇಶ ಹೊರಬರಲಿದೆ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶದ ಬಗ್ಗೆ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ರಾತ್ರಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 4 ಸಾವಿರ ಮಂದಿಯನ್ನು ಈ ಉದ್ದೇಶಕ್ಕಾಗಿ ನಾಮನಿರ್ದೇಶನ ಮಾಡುವ ಅವಕಾಶ ಇದೆ. ಈ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿರ್ದೇಶನ ನೀಡಲಾಗಿದೆ. ದೊಡ್ಡ ಲೀಡರ್‌ಗಳು ನಮಗೆ ಬೇಡ. ಯಾರು ಮನೆಮನೆ ತಿರುಗುತ್ತಾರೋ ? ಅವರಿಗೆ ಜವಾಬ್ದಾರಿ ನೀಡಲಾಗುವುದು ಎಂದರು.
ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್ ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್, ನಿಕೇತ್ ರಾಜ್ ಮೌರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ಬಿ ರಮಾನಾಥ್ ರೈ, ವಿನಯ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ರಾಜ್ಯ ಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ವಿಪ ಸದಸ್ಯೆ ಐವನ್ ಡಿ ಸೋಜ, ಪಕ್ಷದ ಧುರೀಣರಾದ ಕನಚೂರ್ ಮೋನು, ಅಶೋಕ್ ಕೊಡವೂರ್, ಮಿಥುನ್ ರೈ, ಇನಾಯತ್ ಅಲಿ, ಶಶಿಧರ್ ಹೆಗ್ಡೆ, ಮಮತಾ ಗಟ್ಟಿ, ಪದ್ಮರಾಜ್ ಆರ್, ಗಫೂರ್ ಉಡುಪಿ ಉಪಸ್ಥಿತರಿದ್ದರು.







