ಹೆತ್ತವರಿಗೆ ಮಕ್ಕಳಲ್ಲಿ ಸ್ನೇಹ, ಪ್ರೀತಿ ಇರಲಿ: ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು

ವಿಟ್ಲ: ಮಕ್ಕಳಲ್ಲಿ ಹೆತ್ತವರಿಗೆ ಸ್ನೇಹ, ಪ್ರೀತಿ ಅಗತ್ಯ. ಆದರೆ ಅದು ಅತಿಯಾಗಬಾರದು. ಅವರ ಮೇಲೆ ನಿಯಂತ್ರಣ ಇರ ಬೇಕು. ಮಕ್ಕಳು ತಪ್ಪಿ ನಡೆಯುವಾಗ ಅವರನ್ನು ತಿದ್ದುವುದು ಹೆತ್ತವರ ಜವಾಬ್ದಾರಿಯಾಗಿದೆ ಎಂದು ಪೊಯ್ಯತ್ತಬೈಲು ಜುಮಾ ಮಸೀದಿಯ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಅಭಿಪ್ರಾಯಪಟ್ಟಿದ್ದಾರೆ.
ಮೂಡಂಬೈಲ್ ಬೈರಿಕಟ್ಟೆಯ ಕುವ್ವತ್ತುಲ್ ಇಸ್ಲಾಂ ಮದ್ರಸ ಆವರಣದಲ್ಲಿ ನಡೆದ ಸ್ವಲಾತ್ ವಾರ್ಷಿಕ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಪ್ರಧಾನ ಉಪನ್ಯಾನ ನೀಡಿದರು.
ಅಡುಗೆ ಮನೆಯಲ್ಲಿ ಕತ್ತಿ ಇಲ್ಲದೆ ಯಾವುದೇ ಕೆಲಸ ಸಾಗುವುದಿಲ್ಲ.ಅದೇ ರೀತಿ ಮೊಬೈಲ್ ನಮ್ಮ ಜೀವನವನ್ನು ಆವರಿಸಿಕೊಂಡಿದೆ. ಕತ್ತಿಯಂತೆ ನಮಗೆ ಮೊಬೈಲ್ ಪೋನ್‌ನಿಂದ ಧಾರಾಳ ಉಪಯೋಗ ಇದ್ದಂತೆ ಅಪಾಯವೂ ಇದೆ. ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಇವತ್ತಿನ ಕಾಲಘಟ್ಟದಲ್ಲಿ ಮಕ್ಕಳಿಗೆ ತಮ್ಮ ಶಾಲೆ ಮತ್ತು ಊರಿನ ಸ್ನೇಹಿತರು ಬೇಡ.ಅವರಿಗೆ ಇನ್ ಸ್ಟ್ರಾಗ್ರಾಮ್‌ನಲ್ಲಿ ಪರಿಚಯವಾಗುವ ಸ್ನೇಹಿತರು ಹೆಚ್ಚು ಆಪ್ತರಾಗುತ್ತಿದ್ದಾರೆ. ಇದೊಂದು ಕಳವಳಕಾರಿ ವಿಚಾರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕುವ್ವತ್ತುಲ್ ಇಸ್ಲಾಂ ಮದ್ರಸಕ್ಕೆ ಕಟ್ಟಡವನ್ನು ಕೊಡುಗೆಯಾಗಿ ನೀಡಿದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುಎಇಯ ಆರ್ಥಿಕ ತಜ್ಞ ಸಿಎ ಅಬ್ದುಲ್ಲ ಮಾದುಮೂಲೆ ಮತ್ತು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಅವರನ್ನು ಸಂಸ್ಥೆಯ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕುವ್ವತ್ತುಲ್ ಇಸ್ಲಾಂ ಮದ್ರಸ ಸಮಿತಿಯ ಅಧ್ಯಕ್ಷ ಅಂದುಂಞಿ ಬೈರಿಕಟ್ಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುವ್ವತ್ತುಲ್ ಇಸ್ಲಾಮ್ ಮದ್ರಸದ ಸದರ್ ಮುಹಲ್ಲಿಂ ಅಬ್ದುರಹ್ಮಾನ್ ಲತೀಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಮರಕ್ಕಿಣಿ ಜಮಾಅತ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಮರಕ್ಕಣಿ , ಕೋಶಾಧಿಕಾರಿ ಹನೀಫ್ ಹಾಜಿ ಬೆಣ್ಣಪ್ಪಾದೆ, ಯೂಸುಫ್ ಮರಕ್ಕಿಣಿ, ಅಬ್ದುಲ್ಲ ಹಾಜಿ ಮರಕ್ಕಿಣಿ, ಕುವ್ವತ್ತಿಲ್ ಇಸ್ಲಾಮ್ ಮದ್ರಸ ಸಮಿತಿ ಸದಸ್ಯ ಕುಂಞಿ ಹಾಜಿ ನಾರ್ಣಮೂಲೆ ಉಪಸ್ಥಿತರಿದ್ದರು.
ಕುವ್ವತ್ತಿಲ್ ಇಸ್ಲಾಮ್ ಮದ್ರಸ ಸಮಿತಿಯ ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಸರಫಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







