ಬೆಳ್ತಂಗಡಿ: ತಹಶೀಲ್ದಾರ್ ನೇತೃತ್ವದಲ್ಲಿ ಸರಕಾರಿ ಜಾಗದಲ್ಲಿದ್ದ ಶೆಡ್ ತೆರವು

ಬೆಳ್ತಂಗಡಿ: ಕುವೆಟ್ಟು ಗ್ರಾಮದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಶೆಡ್ ಅನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ಗುರುವಾರ ತೆರವುಗೊಳಿಸಲಾಯಿತು.
ಕುವೆಟ್ಟು ಗ್ರಾಮದ ಮದಡ್ಕ ಹಾಲಿನ ಡೈರಿ ಹಿಂಭಾಗದ ಸರಕಾರಿ ಖಾಲಿ ಜಾಗದಲ್ಲಿ ರೌಫ್ ಮತ್ತು ನಿಸಾರ್ ಎಂಬವರು ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದರು ಎಂದು ಈ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆಗೆ ದೂರು ಬಂದಿತ್ತು. ಅದರಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಜ.18 ಕ್ಕೆ ಜಾಗದ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ರೌಫ್ ಮತ್ತು ನಿಸಾರ್ ಕರ್ತವ್ಯಕ್ಕೆ ಅಡ್ಡಿಪಡಿಸಿ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಬಳಿಕ ಕಂದಾಯ ನಿರೀಕ್ಷಕರಿಗೂ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಈ ಬಗ್ಗೆ ತಹಶೀಲ್ದಾರ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜ.19ರಂದು ದೂರು ನೀಡಿದ್ದರು. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಗುರುವಾರ ಸಂಜೆ ಸ್ಥಳಕ್ಕೆ ತೆರಳಿ ಜೆಸಿಬಿ ಬಳಸಿ ಅಕ್ರಮ ಶೆಡ್ ನ್ನು ತೆರವು ಗೊಳಿಸಿದ್ದಾರೆ. ಈ ವೇಳೆ ಅಹಿತಕರ ಘಟನೆ ನಡೆಯದಂತೆ ಬೆಳ್ತಂಗಡಿ ಪೊಲೀಸರು ಭದ್ರತೆ ವಹಿಸಿದ್ದರು.





