ಭಗವಾಧ್ವಜ ಹಾರಿಸಿರುವ ಘಟನೆಯು ಬಿಜೆಪಿಯ ‘ಹಿಡನ್ ಅಜೆಂಡಾ’ : ಬಿ.ಕೆ. ಹರಿಪ್ರಸಾದ್

ಮಂಗಳೂರು: ಮಂಡ್ಯದ ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಭಗವಾಧ್ವಜ ಹಾರಿಸಿರುವ ಘಟ ನೆಯು ಬಿಜೆಪಿ ಗುಪ್ತ ಕಾರ್ಯಸೂಚಿ (ಹಿಡೆನ್ ಅಜೆಂಡಾ) ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಗ್ಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿ 52 ವರ್ಷಗಳಲ್ಲಿ ಒಮ್ಮೆಯೂ ರಾಷ್ಟ ಧ್ವಜ ಹಾರಿಸದ ಬಿಜೆಪಿ ಬಹುಸಂಖ್ಯಾ ತರನ್ನು ಓಲೈಸಲು ಈ ಕೃತ್ಯ ಮಾಡಿದೆ ಎಂದರು.
ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಯಾರೇ ಮಾಡಿದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಆಗ ಮಾತ್ರ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದ ‘ಸರ್ವ ಜನಾಂಗದ ಶಾಂತಿಯ ತೋಟ’ ಅನುಷ್ಠಾನಗೊಳಿಸಿದಂತೆ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು
ಲೋಕಸಭೆ ಚುನಾವಣೆಯ ನಂತರ ರಾಜ್ಯದ ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಲ್ಲಿ ಬಹಳಷ್ಟು ಮಂದಿ ಮುಖ್ಯ ಮಂತ್ರಿ ಹುದ್ದೆಗೆ ಸರದಿಯಲ್ಲಿ ಕಾಯುತ್ತಿದ್ದಾರೆ. ಅವರಲ್ಲಿ ಅಶೋಕ್ ಕೂಡಾ ಒಬ್ಬರು. ಆರ್. ಅಶೋಕ್ ತಿರುಕನ ಕನಸು ಕಾಣುತ್ತಿ ದ್ದಾರೆ. ಅವರ ಮುಖ್ಯಮಂತ್ರಿ ಕನಸು ನನಸಾಗದು ಎಂದರು.
‘ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಯಾವುದೇ ಪಕ್ಷದಲ್ಲಿರಲಿ ಸೌಮ್ಯ ಸ್ವಭಾವದ ವ್ಯಕ್ತಿ ಅವರು. ಅವರು ಕಾಂಗ್ರೆಸ್‌ಗೆ ಸೇರಿ ಬೇಗನೆ ಬಿಟ್ಟು ಹೋಗಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳಬೇಕಾಗಿತ್ತು ಎಂದು ಹೇಳಿದರು.
ರಾಜ್ಯಸಭೆಗೆ ಚುನಾವಣೆ ಘೋಷಣೆ ಆಗಿದೆ. ನೀವು ಸ್ಪರ್ಧಿಸುವಿರಾ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹರಿಪ್ರಸಾದ್ ಈ ಬಗ್ಗೆ ಯೋಚನೆ ಮಾಡಿಲ್ಲ. ವಿಧಾನ ಪರಿಷತ್‌ನಲ್ಲಿ ಇನ್ನೂ ಎರಡು ವರ್ಷ ಅಧಿಕಾರದ ಅವಧಿ ಇದೆ ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಅಭ್ಯರ್ಥಿಯ ರೇಸ್‌ನಲ್ಲಿ ಬಿ.ಕೆ. ಹರಿಪ್ರಸಾದ್ ಇದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ ನನ್ನ ಹೆಸರು ಎಲ್ಲೂ ಕೇಳಿ ಬಂದಿಲ್ಲ. ಇದು ಮಾಧ್ಯಮದವರು ಸೃಷ್ಟಿಸಿದ ಸುದ್ದಿ ’ ಎಂದು ಹೇಳಿದರು.







