ಭಾರತ ವಿಶ್ವಗುರುವಾಗಲು ದೇಶದಲ್ಲಿ ಸೌಹಾರ್ದತೆ ಅಗತ್ಯ: ಶಾಸಕ ಅಶೋಕ್ ರೈ
ಪುರುಷರಕಟ್ಟೆಯಲ್ಲಿ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ

ಪುತ್ತೂರು: ಭಾರತ ವಿಸ್ವ ಗುರುವಾಗಬೇಕಾದರೆ ದೇಶದಲ್ಲಿ ಸೌಹಾರ್ದತೆ ನೆಲೆಸಬೇಕು. ಕೇವಲ ಭಾಷಣ ಮಾಡಿದ ಮಾತ್ರಕ್ಕೆ ಭಾರತ ವಿಶ್ವಗುರುವಾಗಲು ಸಾಧ್ಯವಿಲ್ಲ. ದೇಶದಲ್ಲಿರುವ ಎಲ್ಲಾ ಧರ್ಮದ ಸಹೋದರರು ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ನಾವು ಭಾರತವನ್ನು ವಿಶ್ವಗುರುವಾಗಿ ಕಾಣಲು ಸಾಧ್ಯವಾಗಲಿದೆ. ಎಲ್ಲರೂ ಉಸಿರಾಡುವ ಗಾಳಿಯೊಂದೇ, ರಕ್ತವೂ ಒಂದೇ ಹೀಗಿರುವಾಗ ನಾವು ಜಾತಿ ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಾ ವಿಭಜನೆಯ ಹಾದಿಯನ್ನು ಹಿಡಿಯಬಾರದು. ಜನರು ಪರಸ್ಪರ ಹತ್ತಿರವಾದಾಗ ಮಾತ್ರ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿನ ಹಿಮಾಯತುಲ್ ಇಸ್ಲಾಂ ಮದ್ರಸ ಮತ್ತು ಮಸೀದಿ ವಠಾರದಲ್ಲಿ ನಡೆಯುತ್ತಿರುವ ಧಾರ್ಮಿಕ ಮತಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಗಳ ಬಗ್ಗೆ ಪರಸ್ಪರ ಅರಿತುಕೊಂಡಲ್ಲಿ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಣಲು ಸಾಧ್ಯವಾಗುತ್ತದೆ. ಧರ್ಮದ ಬಗ್ಗೆ ತಿಳುವಳಿಕೆಯ ಕೊರತೆಯಿಂದಲೇ ಇಂದು ಸಮಾಜದಲ್ಲಿ ಧರ್ಮ ದಂಗಲ್‍ಗಳು ನಡೆಯುತ್ತದೆ. ತನ್ನ ಧರ್ಮವನ್ನು ಅರಿತು, ಜೊತೆಗೆ ಸಹೋದರ ಧರ್ಮದ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಪರಸ್ಪರ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಎಲ್ಲರನ್ನೂ ಪ್ರೀತಿಸುವುದೇ ಹಿಂದುತ್ವವಾಗಿದೆ. ಅನ್ಯ ಧರ್ಮದವರನ್ನು ದ್ವೇಷಿಸುವುದು ಹಿಂದುತ್ವ ಎಂದು ನಂಬಿಕೊಂಡ ಅಲ್ಪಜ್ಞಾನಿಗಳು ನಮ್ಮೊಳಗಿ ದ್ದಾರೆ. ಪರಸ್ಪರ ಸಹೋದರರಂತೆ ಭಾವನೆಯಿದ್ದಲ್ಲಿ ಮಾತ್ರ ನಾವು ಮನುಷ್ಯರಾಗಲು ಸಾಧ್ಯವಾಗುತ್ತದೆ. ಮಾನವೀಯ ಧರ್ಮವೇ ಶ್ರೇಷ್ಟ ಎಂಬ ಭಾವನೆ ನಮ್ಮಲ್ಲಿ ಮಾಡಿದಾಗ ಸಹೋದರತ್ವ ಮೂಡುತ್ತದೆ ಅದು ಇಲ್ಲದವರು ಮನುಷ್ಯರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಉಸ್ತಾದ್ ಝುಬೈರ್ ಮಾಸ್ಟರ್ ತೊಟ್ಟಿಕ್ಕಲ್ ಕೇರಳ, ರಿಯಾಝ್ ಫೈಝಿ ಪಟ್ಟೆ, ನಿಯಾಝ್ ಪರ್ಲಡ್ಕ, ಪ್ರಕಾಶ್ ಪಿ.ಕೆ, ಇಸ್ಮಾಯಿಲ್ ಕೊಂಬಾಳಿ, ಉಮ್ಮರ್ ಹಾಜಿ ರೋಯಲ್ ಮುಕ್ವೆ, ಜಮಾಲುದ್ದೀನ್ ಹಾಜಿ ಮುಕ್ವೆ, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ರಹೀಂ ಪಿ.ಕೆ, ಇಬ್ರಾಹಿಂ ಘನಿ, ಪಿಬಿಕೆ ಮುಹಮ್ಮದ್, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ ಮತ್ತಿತರರ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.







