ಮಂಗಳೂರು: ನಗರದಲ್ಲಿ ಆಟೋ ಬಂದ್, ಆರ್‌ಟಿಒ ಚಲೋ ಜಾಥಾ

ಮಂಗಳೂರು: ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಆಟೋ ರಿಕ್ಷಾ ಚಾಲಕರು ಆಟೋ ರಿಕ್ಷಾ ಸಂಚಾರವನ್ನು ಸ್ಥಗಿತಗೊಳಿಸಿ ಆರ್‌ಟಿ ಚಲೋ ಜಾಥಾ ನಡೆಸಿದರು.
ಜ್ಯೋತಿಯ ಅಂಬೇಡ್ಕರ್ ವೃತ್ತದಿಂದ ಆರ್‌ಟಿಒ ಕಚೇರಿ ತನಕ ಜಾಥಾ ನಡೆಸಿದ ಆಟೋ ಚಾಲಕರು ಸಮಸ್ಯೆಗಳ ಬಗೆ ಹರಿಸುವಂತೆ ಆಗ್ರಹಿಸಿದರು. 12 ಗಂಟೆಗಳ ಆಟೋರಿಕ್ಷಾಗಳ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಜಾಥಾದಲ್ಲಿ 2 ಸಾವಿರಕ್ಕೂ ಅಧಿಕ ಆಟೋ ರಿಕ್ಷಾಗಳ ಚಾಲಕ ಮಾಲಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಆರ್‌ಟಿಒ ಅಧಿಕಾರಿ ಶ್ರೀಧರ್ ಮಲ್ಲಾಡ್ ಆಟೋರಿಕ್ಷಾ ಚಾಲಕರ ಮನವಿಯನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಇವಿ ಆಟೋರಿಕ್ಷಾಗಳಿಗೆ ಕಡಿವಾಣ ಹಾಕಬೇಕು ನ.25, 2022ರ ಬಳಿಕ ನೋಂದಣಿಯಾಗಿರುವ ಬ್ಯಾಟರಿ ಚಾಲಿತ ಆಟೋರಿಕ್ಷಾಗಳಿಗೆ ವಲಯ 1ರ ಕ್ರಮಸಂಖ್ಯೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು, ವಲಯ-1 ಕ್ರಮಸಂಖ್ಯೆ ಇಲ್ಲದ ಕಂಪೆನಿಯ ಆಟೋರಿಕ್ಷಾಗಳು ಮಂಗಳೂರು ನಗರದ ವ್ಯಾಪ್ತಿಯಲ್ಲಿ ಸಂಚರಿಸಬಾರದು, ನಗರದ ಹೊರಗೆ ಸಂಚರಿಸುವ ಆಟೋ ರಿಕ್ಷಾಗಳಿಗೆ ವಲಯ -2ರ ಕ್ರಮಸಂಖ್ಯೆಯನ್ನು ಕಡ್ಡಾಯವಾಗಿ ಲಗತ್ತಿಸಬೇಕು, ಕಳೆದ ಹಲವು ವರ್ಷಗಳಿಂದ ಅನಧಿಕೃತವಾಗಿರುವ ಆಟೋ ರಿಕ್ಷಾ ನಿಲ್ದಾಣಗಳನ್ನು ಅಧಿಕೃತ ಗೊಳಿಸಬೇಕು, ಸಿಎನ್‌ಜಿ/ಎಲ್‌ಪಿಜಿ ಆಟೋರಿಕ್ಷಾಗಳಲ್ಲಿ ಮಂಗಳೂರು ನಗರದ ಪರವಾನಿಗೆ ಇಲ್ಲದೆ ನಕಲಿ ವಲಯ-1ರ ಕ್ರಮಸಂಖ್ಯೆ ಲಗತ್ತಿಸಿ ಬಾಡಿಗೆ ಮಾಡುತ್ತಿರುವ ಹಾವಳಿಯನ್ನು ತಡೆಗಟ್ಟಬೇಕು, ಈಗ ಚಾಲ್ತಿಯಲ್ಲಿರುವ ಆಟೋ ರಿಕ್ಷಾಗಳ ಪರವಾನಿಗೆಯನ್ನು ಬ್ಯಾಟರಿಚಾಲಿತ ಆಟೋರಿಕ್ಷಾಗಳಿಗೆ ವರ್ಗಾಯಿಸಲು ಅವಕಾಶ ನೀಡಬೇಕು, ಆಟೋ ರಿಕ್ಷಾಗಳ ಪರ ವಾನಿಗೆಯನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಚಾಲಕನ ಚಾಲನಾ ಪ್ರಮಾಣಪತ್ರ(ಡಿಎಲ್) , ಆಧಾರ್, ಮತ್ತು ಪಡಿ ತರ ಚೀಟಿ ದಾಖಲೆಯ ಪ್ರತಿಯನ್ನು ಕಡ್ಡಾಯಗೊಳಿಸಬೇಕು ಮತ್ತು ಈ ಮೂರು ದಾಖಲೆಗಳಲ್ಲಿ ಮಂಗಳೂರು ನಗರದ ವಿಳಾಸ ಇರುವವರಿಗೆ ಮಾತ್ರ ಅನುಮತಿ ನೀಡಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಆಟೋ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳೂರು ಸಾರಿಗೆ ಪ್ರಾಧಿಕಾರದ ಆಯುಕ್ತರಿಗೆ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ್ ಶೆಟ್ಟಿ ಬೋಲಾರ ಮತ್ತು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಜಾಥಾದ ನೇತೃತ್ವ ವಹಿಸಿದ್ದರು. ಖಜಾಂಚಿ ಲೋಕೇಶ್ ಶೆಟ್ಟಿ, ಗೌರವಾಧ್ಯಕ್ಷ ಮಹಮ್ಮದ್ ಇರ್ಫಾನ್, ಗೌರವ ಸಲಹೆಗಾರ ಅರುಣ್ ಕುಮಾರ್ ಮತ್ತು ರಾಜೇಶ್, ಉಪಾಧ್ಯಕ್ಷರಾದ ಶೇಖರ ದೇರಳಕಟ್ಟೆ ಮತ್ತು ಅಬೂಬಕರ್ ಸುರತ್ಕಲ್, ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ, ಎಂ.ಮೊಹಮ್ಮದ್, ಸಂಘಟನಾ ಕಾರ್ಯಕಾರಿಣಿ ಜೆರಾಲ್ಡ್ ಡಿ ಕುನ್ಹಾ ಮತ್ತು ವಸಂತ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.







