ಮಂಗಳೂರಿನ ಬೆವರ್ಲಿ ಹಿಲ್ಸ್‌ನಲ್ಲಿ ಹೊಸ ಐಟಿ ಪಾರ್ಕ್: ಶರತ್ ಬಚ್ಚೇಗೌಡ

ಮಂಗಳೂರು: ಮಂಗಳೂರಿನ ದೇರೆಬೈಲ್ ಪ್ರದೇಶದ ಬೆವರ್ಲಿ ಹಿಲ್ಸ್‌ನಲ್ಲಿ ಕಿಯೋನಿಕ್ಸ್‌ಗೆ ಸೇರಿದ 4 ಎಕರೆ ಪ್ರದೇಶದಲ್ಲಿ ಹೊಸ ಐಟಿ ಪಾರ್ಕ್ ತಲೆ ಎತ್ತಲಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಘೋಷಿಸಿದರು.
ಇಲ್ಲಿನ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಂಗಳೂರು ಟೆಕ್ನೋವಾಂಜಾ3.0’ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಹೊಸ ಐಟಿ ಪಾರ್ಕ್‌ನಲ್ಲಿ ಸಾಗರ ತಂತ್ರಜ್ಞಾನ, ಸಾಗರ ಜೈವಿಕ ತಂತ್ರಜ್ಞಾನ ವಲಯದ ಕಂಪನಿಗಳು ಹಾಗೂ ಸ್ಟಾರ್ಟ್ ಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಜತೆಗೆ, ಕೌಶಲಾಭಿವೃದ್ಧಿ ಕೇಂದ್ರಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಉದ್ಯಮಿಗಳ ನಾಡು ದಕ್ಷಿಣ ಕನ್ನಡ, ಬ್ಯಾಂಕಿಂಗ್, ಫಿನ್ ಟೆಕ್, ಆತಿಥ್ಯ ಹಾಗೂ ಆರೋಗ್ಯ ವಲಯದ ದಿಗ್ಗಜರು ಈ ಭಾಗದವರು. ಅತ್ಯುತ್ತಮ ಮೂಲ ಸೌಕರ್ಯ ಉನ್ನತ ದರ್ಜೆಯ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಇಲ್ಲಿನ ಪ್ರತಿಭಾನ್ವಿತರು ಸ್ಥಳೀಯವಾಗಿ ಉದ್ಯಮ ಆರಂಭಿಸಿ, ಸ್ಥಳೀಯರಿಗೆ ಇಲ್ಲಿ ಉದ್ಯೋಗಾವಕಾಶ ಸೃಷ್ಟಿಸುವಂತಾಗಬೇಕು. ಅದಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ರೀತಿಯ ನೆರವು ಕಲ್ಪಿಸುತ್ತದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.
ಸ್ಟಾರ್ಟ್‌ಅಪ್‌ಗಳಿಗೆ ಸರಳ ನಿಬಂಧನೆ: ಸ್ಥಳೀಯ ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ’ಪ್ರಾಶಸ್ತ್ಯದ ಸಾರ್ವಜನಿಕ ಸಂಗ್ರಹಣೆ ನೀತಿ’ ರೂಪಿಸುತ್ತಿದ್ದು, ರಾಜ್ಯದ ಸ್ಟಾರ್ಟ್‌ಅಪ್‌ಗಳು ಸರಕಾರಿ ಟೆಂಡರ್ ಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ನಿಬಂಧನೆ ಸಡಿಲಗೊಳಿಸಲು ತೀರ್ಮಾನಿಸಿದೆ ಎಂದು ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಏಕರೂಪ ಕೌರ್ ತಿಳಿಸಿದರು.
ಮೇಡ್ ಇನ್ ಕರ್ನಾಟಕದ ಉತ್ಪನ್ನಗಳನ್ನು ಖರೀದಿಸಿ, ಸ್ಟಾರ್ಟ್‌ಅಪ್‌ಗಳನ್ನು ಪೋಷಿಸಲು ಸರ್ಕಾರ ಬದ್ಧ ಎಂದರು.
ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಲು ಇಂತಿಷ್ಟು ವರ್ಷದ ಅನುಭವ, ಹಿಂದೆ ನಿಭಾಯಿಸಿದ ಯೋಜನೆಗಳ ಮೊತ್ತ ಇತ್ಯಾದಿ ಹಲವು ಕಠಿಣ ನಿಬಂಧನೆಗಳಿರುತ್ತವೆ. ಇಂದರಿಂದಾಗಿ ಟೆಂಡರ್‌ನಲ್ಲಿ ಭಾಗವಹಿಸಲು ಸ್ಟಾರ್ಟ್‌ಅಪ್‌ಗಳಿಗೆ ಕಷ್ಟವಾಗುತ್ತದೆ. ಇದಕ್ಕೆ ಪರಿಹಾರವಾಗಿ ಸ್ಟಾರ್ಟ್‌ಅಪ್‌ಗಳಿಗೆ ನಿಬಂಧನೆಗಳನ್ನು ಸರಳಗೊಳಿಸಿ, ಟೆಂಡರ್‌ನಲ್ಲಿ ಭಾಗವಹಿ ಸಲು ರಾಜ್ಯ ಸರಕಾರ ಅನುಕೂಲ ಮಾಡಿಕೊಡಲಿದೆ ಎಂದರು.
ಸರಕಾರದ ಸೆಕ್ಟರ್ ಆಧಾರಿತ ನೀತಿಗಳಿಂದ ರಾಜ್ಯಕ್ಕೆ ಹೂಡಿಕೆ ಹರಿದು ಬರುತ್ತಿದ್ದು, ವಿಶೇಷವಾಗಿ ಇಲೆಕ್ಟ್ರಾನಿಕ್ ವಲಯಕ್ಕೆ ಹೆಚ್ಚಿನ ಹೂಡಿಕೆ ಬರುತ್ತಿದೆ. ಅನಿಮೇಷನ್ ವಿಷುಯಲ್ ಎಫೆಕ್ಸ್ಟ್, ಗೇಮ್ಸ್ ಮತ್ತು ಕಾಮಿಕ್ಸ್ (ಎವಿಜಿಸಿ) ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಮುಂದಿನ 4 ವರ್ಷಗಳಲ್ಲಿ ಸುಮಾರು 30,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ನವೋದ್ಯಮಗಳನ್ನು ಬೆಂಬಲಿಸಲು ಎಲಿವೇಟ್‌ನಂತಹ ಉಪಕ್ರಮಗಳನ್ನು ರೂಪಿಸಲಾಗಿದೆ. ಇದರಿಂದಾಗಿಯೇ ಮಂಗಳೂರಿನಂತಹ ಉದಯೋನ್ಮುಖ ಕ್ಲಸ್ಟರ್‌ಗಳಲ್ಲಿ ಉದ್ಯಮಶೀಲ ಪರಿಸರ ವ್ಯವಸ್ಥೆ ಬಲಗೊಳುತ್ತಿದೆ,ಎಂದು ಹೇಳಿದರು.
ದಕ್ಷಿಣ ಕನ್ನಡ ಪ್ರತಿಭಾನ್ವಿತರ ಕಣಜ. ಪ್ರತಿ ವರ್ಷ ಇಲ್ಲಿನ ಕಾಲೇಜುಗಳಿಂದ 10,000 ಇಂಜಿನಿಯರಿಂಗ್ ವಿದ್ಯಾರ್ಥಿಗಳು, 30 ಸಾವಿರ ಪದವೀಧರರು ಹೊರಬರುತ್ತಿದ್ದಾರೆ. ಪ್ರತಿಭಾನ್ವಿತರು ಸ್ಥಳೀಯವಾಗಿ ಉದ್ಯಮ ಸ್ಥಾಪಿಸುವಂತಾಗಲು ಅನುಕೂಲಕರ ನೀತಿಗಳನ್ನು ಹೊರತಂದಿದ್ದೇವೆ. ಇದರಿಂದಾಗಿ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗು ತ್ತವೆ. ಉದ್ಯಮಗಳು ಹಾಗೂ ಶಿಕ್ಷಣದ ನಡುವಿನ ಕಂದಕಗಳನ್ನು ಸರಿಪಡಿಸಲು ಅಗತ್ಯ ಕೌಶಲ ತರಬೇತಿ ನೀಡಲು ಬದ್ಧ ವಾಗಿ, ಶೇ.50-70 ರಷ್ಟು ತರಬೇತಿ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ. ಇಂಥ ಕ್ರಮಗಳಿಂದಾಗಿ ರಾಜ್ಯದ ಉದಯೋನ್ಮುಖ ಟೆಕ್ ಕ್ಲಸ್ಟರ್‌ಗಳು ಪ್ರಗತಿ ಸಾಧಿಸುತ್ತಿವೆ,ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಡಿಇಎಂ ಅಧ್ಯಕ್ಷ ಬಿ.ವಿ ನಾಯ್ಡು, ಕೆಡಿಇಎಂನ ಸಿಇಓ ಸಂಜೀವ್ ಗುಪ್ತಾ, ದಿ ಮಿಲ್, ಟೆಕ್ನಿಕಲರ್ ಕ್ರಿಯೇಟಿವ್ ಸ್ಟುಡಿಯೋಸ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಕೆ ಚಂದ್, ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಚಂದ್ರು ಅಯ್ಯರ್, ಆಕ್ಸೆಂಚರ್‌ನ ಆರತಿ ಕುಚಿಬಟ್ಲ, ಡೆಲಿವರಿ ಸಂಸ್ಥೆಯ ಸಿಇಒ ಅಜಿತ್ ಪೈ, 99 ಗೇಮ್ಸ್ ಸಿಇಒ, ಟಿಐಇ ಮಂಗಳೂರಿನ ರೋಹಿತ್ ಭಟ್ ಉಪಸ್ಥಿತರಿದ್ದರು.
"2001ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಸಣ್ಣ ಐಟಿ ಪಾರ್ಕ್ ಈಗ ’ಸಿಲಿಕಾನ್ ಬೀಚ್’ ಆಗಿ ಹೊರಹೊಮ್ಮುವ ಮಟ್ಟಕ್ಕೆ ಬೆಳೆದಿದೆ. ಕಳೆದ 18 ತಿಂಗಳಲ್ಲಿ ಮಂಗಳೂರಿನಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಹೂಡಿಕೆ ಮಾಡಿದ್ದು, 25-30 ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿವೆ. ಮುಂದಿನ 2 ದಶಕಗಳಲ್ಲಿ ಮಂಗಳೂರು ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಲಿದೆ"
-ಬಿ.ವಿ ನಾಯ್ಡು, ಕೆಡಿಇಎಂ ಅಧ್ಯಕ್ಷ
"ಸ್ಟಾರ್ಟ್‌ಅಪ್ ಪರಿಸರ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ, ರಾಜ್ಯಾದ್ಯಂತ ವಿಸ್ತರಿಸಿದೆ ಎಂದು ಜಗತ್ತಿಗೆ ತೋರಿಸಿ ಕೊಡಬೇಕಿದೆ. ಅದಕ್ಕೆ ಪೂರಕವಾಗಿ ಕೆಡಿಇಎಂ ಕೆಲಸ ಮಾಡುತ್ತಿದೆ.ಕಳೆದ ಎರಡು ವರ್ಷದಲ್ಲಿ ಮಂಗಳೂರು ಬಹಳಷ್ಟು ಹೊಸ ಕೈಗಾರಿಕೆಗಳನ್ನು ಕಂಡಿದೆ, ಅವುಗಳು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮತ್ತು ಕ್ಲಸ್ಟರ್ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಟೆಕ್ ಮಹೀಂದ್ರಾದಲ್ಲಿ 100+, ಇಂಕ್ಚರ್ 20+, ಎಕ್ಸ್‌ಫೆನೊ 30+, ಮೈಕ್ರೋ ಜೆನೆಸಿಸ್ - 15+ ಉದ್ಯೋಗಗಳು ಸೃಷ್ಟಿಯಾಗಿವೆ. ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ತನ್ನತ್ತ ಸೆಳೆದಿರುವ ಈ ಕ್ಲಸ್ಟರ್ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುವ ವಿಶ್ವಾಸ ನಮಗಿದೆ"
-ಸಂಜೀವ್ ಗುಪ್ತಾ, ಕೆಡಿಇಎಂನ ಸಿಇಒ







