ಮಂಗಳೂರು; ಸ್ಕೂಟರ್ ಢಿಕ್ಕಿ: ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

ಮಂಗಳೂರು: ನಗರದ ಕುಲಶೇಖರ ಸಮೀಪದ ಬಿಕರ್ನಕಟ್ಟೆಯ ರಸ್ತೆ ಬದಿಯ ಕಂಬಕ್ಕೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಕುಲಶೇಖರ ನಿವಾಸಿ, ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಟೆರೆನ್ಸ್ ಡಿಸೋಜ(21) ಮೃತಪಟ್ಟವರು.
ರಾತ್ರಿ ಸುಮಾರು 10ಕ್ಕೆ ತನ್ನ ಹೆತ್ತವರೊಂದಿಗೆ ಕುಲಶೇಖರ ಕೋರ್ಡೆಲ್ ಚರ್ಚ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟೆರೆನ್ಸ್ ಡಿಸೋಜ ಬಳಿಕ ಪಡೀಲ್‌ನಲ್ಲಿರುವ ಪೆಟ್ರೋಲ್ ಪಂಪ್‌ಗೆ ಹೋಗಿ ಬರುವುದಾಗಿ ತಿಳಿಸಿದ್ದರು. ಬಿಕರ್ನಕಟ್ಟೆಯ ಫ್ಲೈ ಓವರ್ ಬಳಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿ ಚರಂಡಿಗೆ ತಡೆಯಾಗಿ ಹಾಕಲಾಗಿದ್ದ ಸಣ್ಣ ಕಂಬಕ್ಕೆ ಟೆರೆನ್ಸ್‌ರ ಸ್ಕೂಟರ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ತಲೆಗೆ ಗಂಭೀರ ಗಾಯಗೊಂಡ ಟೆರೆನ್ಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.





