ಪ್ರತಿ ವರ್ಷ ನಿಗದಿತ ಅವಧಿಗೆ ಗಾಳಿಪಟ ಉತ್ಸವ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾದ ಮಂಗಳೂರಿನಲ್ಲಿ ಗಾಳಿಪಟ ಉತ್ಸವವನ್ನು ಪ್ರತಿ ವರ್ಷ ನಿಗದಿತ ದಿನಾಂಕದಂದು ನಡೆಸಲು ಪ್ರಯತ್ನಿಸುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಟೀಮ್ ಮಂಗಳೂರು ತಂಡದ ಆಶ್ರಯದಲ್ಲಿ ಮಂಗಳೂರಿನ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ಟೀಮ್ ಮಂಗಳೂರು ತಂಡ ಕಡಿಮೆ ಅವಧಿಯಲ್ಲಿ ಉತ್ಸವವನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಈ ಉತ್ಸವ ಪ್ರಸಿದ್ಧಿ ಪಡೆಯಬೇಕಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ಟೂರಿಸಂ ಕ್ಯಾಲೆಂಡರ್ ರೂಪಿಸಿಕೊಂಡು ಗಾಳಿ ಪಟ ಉತ್ಸವವನ್ನು ಶಾಶ್ವತವಾಗಿ ಅಳವನಡಿಸಕೊಂಡು ಪ್ರೋತ್ಸಾಹ ನೀಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಸಂವಿಧಾನ ಜಾಗೃತಿ ಯಾತ್ರೆಯನ್ನು ಉಲ್ಲೇಖಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ನಮ್ಮ ಸಂವಿಧಾನದ ದೇಶದ ಪವಿತ್ರ ಗ್ರಂಥ. ವಿಶ್ವದಲ್ಲಿ ಭಾರತ ದೇಶದ ಬಹುಮುಖಿ ಸಂಸ್ಕೃತಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯುವಲ್ಲಿ ಸಂವಿಧಾನದ ಪಾತ್ರ ಮಹತ್ತರವಾಗಿದೆ. ಆದ್ದರಿಂದ ಸಂವಿಧಾನ ಬಗ್ಗೆ ಎಲ್ಲರೂ ತಿಳಿದುಕೊಂಡು ದೇಶದ ಐಕ್ಯತೆ ಗಟ್ಟಿ ಮಾಡಬೇಕು ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೇರಿದ್ದ ಗಣ್ಯರು ಹಾಗೂ ಸಭಿಕರಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪಾಲಿಕೆ ಆಯುಕ್ತ ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಉಪಸ್ಥಿತರಿದ್ದರು. ಗೌರವ್ ಹೆಗ್ಡೆ ಸ್ವಾಗತಿಸಿದರು. ಸೈದುದ್ದೀನ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.
ಬಾನಂಗಳದಲ್ಲಿ ಅಮೀಬಾ, ಬೆಕ್ಕು, ಹಲ್ಲಿ, ಚಿರತೆ ಹಾರಾಟ
ತಣ್ಣೀರುಬಾವಿ ಕಡಲ ಕಿನಾರೆಯ ಬಾನಂಗಳ ಶನಿವಾರ ಸಂಜೆಯ ವೇಳೆಗೆ ಅಮೀಬಾ, ಬೆಕ್ಕು, ಹಲ್ಲಿ, ಚಿರತೆ, ಹುಲಿ, ಫೆರ್ರಿ ಲೇಡಿ, ಕಥಕ್ಕಳಿ, ಬಟರ್‌ಫ್ಲೈ ಟ್ರೇನ್... ಹೀಗೆ ನೂರಾರು ಬಗೆಯ ಬಣ್ಣ ಬಣ್ಣದ, ವಿನ್ಯಾಸಭರಿತ ದೇಶ ವಿದೇಶಗಳ ಗಾಳಿಪಟಗಳಿಂದ ತುಂಬಿತ್ತು.
ಮಲೇಶ್ಯಾ, ಇಂಡೋನೇಶ್ಯಾ, ಥಾಯ್ಲೆಂಡ್, ಯುಕ್ರೇನ್, ಗ್ರೀಸ್, ವಿಯೆಟ್ನಾಂ ಮೊದಲಾದ ವಿದೇಶಗಳ ಗಾಳಿಪಟ ಹಾರಾಟ ಗಾರರು ತಮ್ಮ ಬೃಹತ್ ಗಾತ್ರದ ಬೆಲೂನ್ ಮಾದರಿಯ ಗಾಳಿಪಟಗಳನ್ನು ಹಾರಿಸಿದರು. ಟೀಮ್ ಮಂಗಳೂರು ತಂಡದ ಸಾಂಪ್ರದಾಯಿಕ ಶೈಲಿಯ ಕಥಕ್ಕಳಿ ಗಾಳಿಪಟವೂ ತಾನೇನೂ ಹಾರಾಟದಲ್ಲಿ ಕಡಿಮೆ ಇಲ್ಲ ಎಂಬಂತೆ ಬೃಹತ್ ಗಾತ್ರದ ಗಾಳಿಪಟಗಳಿಗೆ ಪೈಪೋಟಿ ನೀಡುವಂತಿತ್ತು. ವಿಹಾರಕ್ಕಾಗಿ, ಗಾಳಿಪಟ ಉತ್ಸವ ವೀಕ್ಷಣೆಗಾಗಿ ತಣ್ಣೀರು ಬಾವಿ ಕಡಲ ಕಿನಾರೆಗೆ ಆಗಮಿಸಿದ್ದ ಸಾವಿರಾರು ಮಂದಿ ಮಕ್ಕಳೊಂದಿಗೆ ಆಗಮಿಸಿದ್ದ ಪ್ರೇಕ್ಷಕರು, ಪ್ರವಾಸಿಗರು ಕೂಡಾ ಬೃಹತ
ಗಾತ್ರದ ಗಾಳಿಪಟಗಳ ಎದುರು ವೀಡಿಯೋ ಚಿತ್ರೀಕರಣ, ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ದ.ಕ. ಜಿಲ್ಲಾಡಳಿತದ ಸಹಕಾರ ಹಾಗೂ ಎಂಆರ್‌ಪಿಎಲ್ ಒಎನ್‌ಜಿಸಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವದಲ್ಲಿ ನೂರಾರು ಸಂಖ್ಯೆಯ ಗಾಳಿಪಟ ಹಾರಾಟಗಾರರು, ಮಾರಾಟಗಾರರು, ಪ್ರದರ್ಶನಕಾರರು ಭಾಗವಹಿಸುತ್ತಿದ್ದಾರೆ.
ಒಂದೆಡೆ ಗಾಳಿಪಟ ತಜ್ಞರ ಬೃಹತ್ ಗಾತ್ರದ ಗಾಳಿಪಟಗಳು ಬಾನಂಗದಲ್ಲಿ ಹಾರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕರು, ಪ್ರವಾಸಿಗರು ಕೂಡಾ ಮಾರಾಟ ಮಳಿಗೆಗಳಿಂದ ಗಾಳಿಪಟ ಖರೀದಿಸಿ ಹಾರಾಟ ನಡೆಸುವ ಮೂಲಕ ಮಕ್ಕಳು, ಕುಟುಂಬದ ಜತೆ ಸಂಭ್ರಮಿಸುವುದು ಕಂಡು ಬಂತು.







