ಮಂಗಳೂರು: ನ್ಯಾಯಾಧೀಶರ ನೂತನ ವಸತಿಗೃಹಗಳ ಉದ್ಘಾಟನೆ

ಮಂಗಳೂರು: ನಗರದ ಲಾಲ್‌ಬಾಗ್ ಸಮೀಪದ ಹ್ಯಾಟ್‌ಹಿಲ್‌ನಲ್ಲಿ ನಿರ್ಮಿಸಿರುವ ನ್ಯಾಯಾಧೀಶರ ನೂತನ ವಸತಿ ಸಂಕೀರ್ಣ ವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭ ಹೈಕೋಟ್ ನ್ಯಾಯಮೂರ್ತಿಗಳಾದ ಬಿ.ಎಂ. ಶ್ಯಾಮಪ್ರಸಾದ್, ಮುಹಮ್ಮದ್ ನವಾಝ್, ಪ್ರಧಾನ ಜಿಲ್ಲಾ ನ್ಯಾಯಾಧೀಶ ರವೀಂದ್ರ ಜೋಶಿ, ಹೈಕೋರ್ಟ್ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್ ಕುಮಾರ್, ಲೋಕೋಪಯೋಗಿ ಇಲಾಖೆ ಕೇಂದ್ರ ವಲಯದ ಮುಖ್ಯ ಇಂಜಿನಿಯರ್ ಬಿ.ವಿ. ಜಗದೀಶ್, ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಪಿ. ಅಮರನಾಥ್ ಜೈನ್, ಅಧೀಕ್ಷಕ ಇಂಜಿನಿಯರ್ ಗೋಕುಲ್‌ದಾಸ್ ಹಾಜರಿದ್ದ್ದರು.
ಈ ವಸತಿ ಸಂಕೀರ್ಣದ ಬ್ಲಾಕ್ ‘ಬಿ’ಯ ನಾಲ್ಕು ಮಹಡಿಯಲ್ಲಿ ತಲಾ 2ರಂತೆ 8 ಮನೆಗಳಿವೆ. ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಕ್ರಿಯೇಟಿವ್ ಇಂಜಿನಿಯರ್ಸ್ ಕಂಪನಿಯು ಇದನ್ನು ನಿರ್ಮಿಸಿದೆ.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ 123 ಕೋ.ರೂ.ವೆಚ್ಚದ ಯೋಜನೆ ಸಿದ್ಧಪಡಿಸಲಾ ಗಿದೆ. ಇದರಲ್ಲಿ ನ್ಯಾಯಾಲಯ ಕಲಾಪ ಕೊಠಡಿಗಳು, ಅಭಿಯೋಜಕರ ಕೊಠಡಿಗಳು, ಬಾರ್ ಅಸೋಸಿಯೇಶನ್ ಕೊಠಡಿ, ವಸ್ತು ಸಂಗ್ರಹಾಲಯ ಸಹಿತ ವಿವಿಧ ವಿಭಾಗಗಳಿಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಡಲಾಗಿದೆ. ಬಂಟ್ವಾಳದಲ್ಲೂ 30 ಕೋ.ರೂ.ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣಕ್ಕೆ ಯೋಜನೆ ರೂಪಿಸಲಾಗಿದೆ. ಎರಡೂ ಪ್ರಸ್ತಾವಗಳು ಸರಕಾರಕ್ಕೆ ಸಲ್ಲಿಸಲಾಗುವುದು. ರಾಜ್ಯ ಸರಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.







