ಬೋಳಿಯಾರ್: ಜಾರದಗುಡ್ಡ ದರ್ಗಾದಲ್ಲಿ ಅಧಿಕಾರಿಗಳ ಸಮಾಲೋಚನಾ ಸಭೆ

ಕೊಣಾಜೆ: ಬೋಳಿಯಾರ್ ಗ್ರಾಮದ ಜಾರದಗುಡ್ಡ ದರ್ಗಾ ಶರೀಫ್ ಉರೂಸ್ ಪ್ರಯುಕ್ತ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆ ವಿದಾನಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ದರ್ಗಾದಲ್ಲಿ ನಡೆಯಿತು.
ದರ್ಗಾಕ್ಕೆ ಹೊರ ಊರಿನ ಜನರೂ ಜಾತಿ, ಧರ್ಮ ಭೇದವಿಲ್ಲದೆ ಬರುವುದರಿಂದ ಯಾವುದೇ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಪ್ರಮುಖವಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸದ ಜೊತೆ ಎರಡೂ ಕಡೆ ವಿಸ್ತರಿಸುವ ಕೆಲಸ ಸಮರ್ಪಕವಾಗಿ ನಡೆಯಬೇಕು. ಅಗತ್ಯ ಇರುವಲ್ಲಿ ದಾರಿದೀಪ ವ್ಯವಸ್ಥೆ ಹಾಗೂ ಹಾಳಾಗಿರುವ ದಾರಿದೀಪ ತಕ್ಷಣ ದುರಸ್ತಿ ಆಗಬೇಕು. ಈಗಾಗಲೇ ಬೆಳಗ್ಗೆ ಮತ್ತು ಸಾಯಂಕಾಲ ಬರುವ ಸರ್ಕಾರಿ ಬಸ್ ಉರೂಸ್ ಸಂದರ್ಭ ಮಧ್ಯಾಹ್ನವೂ ಬರುವ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಖಾದರ್ ಸೂಚಿಸಿದರು.
ಉರೂಸ್ ಸಂದರ್ಭ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವುದಾಗಿ ಕಣಚೂರು ಸಂಸ್ಥೆಯ ಆಡಳಿತ ನಿರ್ದೇಶಕ ಯು.ಕೆ.ಮೋನು ಭರವಸೆ ನೀಡಿದರು.ವಕ್ಫ್‌ನಿಂದ ಆವರಣ ಗೋಡೆಗೆ ಐದು ಲಕ್ಷ ಬಂದಿದ್ದು ಕೆಲಸ ಪೂರ್ಣಗೊಂಡಿದೆ. ಉರೂಸ್ ಪ್ರಯುಕ್ತ ವಿಶೇಷ ಅನುದಾನದ ವ್ಯವಸ್ಥೆ ಮಾಡುವಂತೆ ವಕ್ಫ್ ಅಧಿಕಾರಿ ಅಬೂಬಕ್ಕರ್ ಮನವಿ ಮಾಡಿದರು. ಒಳ ರಸ್ತೆಯ ಇಕ್ಕಟ್ಟಾಗಿ ರುವುದರಿಂದ ಬಸ್ಸುಗಳು ನಿಧಾನವಾಗಿ ಸಂಚರಿಸಲಿ ಎಂದು ಜಾರದಗುಡ್ಡ ರಿಫಾಯಿಯಾ ಜುಮಾ ಮಸೀದಿ ಅಧ್ಯಕ್ಷ ಸಮೀರ್ ಮನವಿ ಮಾಡಿದರು.
ತಹಸೀಲ್ದಾರ್ ಪುಟ್ಟರಾಜು, ವಕ್ಫ್ ಸಲಹಾ ಸಮಿತಿಯ ಮಾಜಿ ಜಿಲ್ಲಾಧ್ಯಕ್ಷರಾದ ಯು.ಕೆ.ಮೋನು ಕಣಚೂರು, ಮೆಸ್ಕಾಂ ಸಹಾಯಕ ಅಭಿಯಂತರ ದಯಾನಂದ, ಕಿರಿಯ ಅಭಿಯಂತರ ನಿತೇಶ್ ಹೊಸಗದ್ದೆ, ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುನಿತಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶೈಲಾ, ಬೋಳಿಯಾರ್ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಶುಕೂರ್, ಅಭಿವೃದ್ಧಿ ಅಧಿಕಾರಿ ಸುಧಾರಾಣಿ, ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ, ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕ್ಕರ್, ಜಾರದಗುಡ್ಡ ರಿಫಾಯಿಯಾ ಜುಮಾ ಮಸೀದಿ ಅಧ್ಯಕ್ಷ ಸಮೀರ್, ಕಾರ್ಯದರ್ಶಿ ಸಮೀರ್ ಕಲ್ಲಕಾಡು, ಕೋಶಾಧಿಕಾರಿ ಹಮೀದ್ ಉಸ್ತಾದ್, ಖತೀಬ್ ಬಶೀರ್ ಸಖಾಫಿ ಸಾಲೆತ್ತೂರು, ಮುಖ್ಯಗುರು ಅಬ್ದುಲ್ ಲತೀಫ್ ಮದನಿ, ಮುಅಲ್ಲಿಂ ಹಮೀದ್ ಮುಸ್ಲಿಯಾರ್, ಆಡಳಿತ ಸಮಿತಿ ಸದಸ್ಯರಾದ ಅಬ್ದುಲ್ ರಫೀಕ್ ಮೇಸ್ತ್ರಿ ಕಲ್ಲಕಾಡು, ಶರೀಫ್ ಕೊರಂಗಿಪಳ್ಳ, ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಗ್ನಿಶಾಮಕ ದಳ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಾ.ಪಂ.ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್ ನಿರೂಪಿಸಿದರು.







