ಬೆಳ್ತಂಗಡಿ: ಮರಕ್ಕೆ ಕಾರು ಢಿಕ್ಕಿ; ಚಾಲಕ ಮೃತ್ಯು

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೀಟು-ಅಂಬಡ್ತ್ಯಾರು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ರಾಣಿಬೆನ್ನೂರು ತಾಲೂಕು ಹಾವೇರಿಯ ಮನೋಜ್ ಕುಮಾರ್ ಮತ್ತು ಮನೆಯವರು ಬೆಳ್ತಂಗಡಿ ಕಡೆಯಿಂದ ಕೊಟ್ಟಿಗೆಹಾರದ ಕಡೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಢಿಕ್ಕಿಯಾಗಿದ್ದು ಚಾಲಕ ಶ್ರೀಧರ ಸಣ್ಣ ನಿಂಗನವರ್ ಗಂಭೀರ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದ ಮನೋಜ್ ಕುಮಾರ್ ಅವರ ತಾಯಿ ರೆಜಿನಾ ಗ್ಲೋರಿ ಹಾಗೂ ತಂಗಿ ಪ್ರಾರ್ಥನಾ ಗಾಯಗೊಂಡಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪಘಾತ ನಡೆದ ಸ್ಥಳ ಸೇರಿದಂತೆ ತಾಲೂಕಿನ ಈ ಹೆದ್ದಾರಿಯಲ್ಲಿ ಅಭಿವೃದ್ಧಿಗಾಗಿ ರಸ್ತೆಯನ್ನು ಅಲ್ಲಲ್ಲಿ ಅಗೆದು ಹಾಕಲಾ ಗಿದೆ. ರಸ್ತೆ ಇಡೀ ಧೂಳುಮಯವಾಗಿದ್ದು ಘನವಾಹನಗಳು ಸಂಚರಿಸುವ ವೇಳೆ ರಸ್ತೆ ಕಾಣದ ಸ್ಥಿತಿ ನಿರ್ಮಾಣವಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೋಸ್ಕರ ಕ್ಷಣಕ್ಕೊಂದು ರೀತಿ ಸಂಚಾರ ಬದಲಾವಣೆಗೊಳ್ಳುತ್ತಿರುವ ಈ ಹೆದ್ದಾರಿಯಲ್ಲಿ ತೀವ್ರ ಎಚ್ಚರದಿಂದ ವಾಹನ ಚಲಾಯಿಸುವುದು ಅಗತ್ಯವಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸರಿಯಾದ ಸೂಚನಾ ಫಲಕಗಳಿಲ್ಲದೆ ಇದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.







