ನಗರದಲ್ಲಿ ಟ್ರಾಫಿಕ್ ಪೊಲೀಸರ ಕಣ್ಣು ತಪ್ಪಿಸಿದರೂ, ಮೂರನೇ ಕಣ್ಣು ನಿಮ್ಮನ್ನು ನೋಡುತ್ತಿದೆ: ಕಮಿಷನರ್ ಅನುಪಮ್ ಅಗರ್ವಾಲ್
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ

ಮಂಗಳೂರು: ನಗರದ ರಸ್ತೆಯಲ್ಲಿ ಪೊಲೀಸರು ಕಾಣಿಸುತ್ತಿಲ್ಲವೆಂದು ಅವರ ಕಣ್ಣು ತಪ್ಪಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸಬೇಡಿ, ಮೂರನೇ ಕಣ್ಣು ನಿಮ್ಮ ಚಲನವಲನಗಳನ್ನು ಗಮನಿಸುತ್ತಿದೆ. ನಗರದ ಅಲ್ಲಲ್ಲಿರುವ ಸಿಸಿ ಕ್ಯಾಮರಾಗಳ ಮೂಲಕ ಎಲ್ಲವೂ ದಾಖಲಾಗುತ್ತದೆ . ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ದಂಡ ಖಚಿತ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮಂಗಳೂರು ನಗರ ಸಂಚಾರಿ ಪೊಲೀಸ್, ಸಾರಿಗೆ ಇಲಾಖೆ ಮತ್ತು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಹಯೋಗದಲ್ಲಿ ಬುಧವಾರ ಕಂಕನಾಡಿಯ ಫಾದರ್ ಮುಲ್ಲರ್ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ನಗರದಲ್ಲಿ ಕಳೆದ ವರ್ಷ ಟ್ರಾಫಿಕ್ ಉಲ್ಲಂಘನೆಯ ಸುಮಾರು 1.60 ಲಕ್ಷ ಪ್ರಕರಣಗಳನ್ನು ಮತ್ತು ಕಳೆದ ಜನವರಿಯಲ್ಲಿ 20 ಸಾವಿರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಸುಮಾರು 100ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ.ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಾಗರಿಕರಿಗೂ ರಸ್ತೆ ಸುರಕ್ಷತೆಯ ಅರಿವು ಮೂಡಿಸಲಾಗಿದೆ.ದ್ವಿಚಕ್ರ ವಾಹನಗಳ ಚಾಲನೆಯ ಸಂದರ್ಭದಲ್ಲಿ ಹೆಲ್ಮೆಟನ್ನು ಸರಿಯಾಗಿಯೇ ಧರಿಸಬೇಕು. ನಾಲ್ಕು ಚಕ್ರಗಳ ವಾಹನಗಳಲ್ಲಿ ಪ್ರಯಾಣಿಸುವಾಗ ಚಾಲಕರು ಸೇರಿದಂತೆ ವಾಹನದಲ್ಲಿ ಪ್ರಯಾಣಿಸುವ ಎಲ್ಲರೂ ಸೀಟ್ ಬೆಲ್ಟ್ ಹಾಕುವುದು ಕಡ್ಡಾಯವಾಗಿದೆ ಎಂದರು.
ಟ್ರಾಫಿಕ್ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುವುದರಿಂದ ಅಪಘಾತ ಸಂಭವಿಸುವುದನ್ನು ಕಡಿಮೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದಿಂದ ಸಾಯುವ ಯುವಜನರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡುವಾಗ ಹೆತ್ತವರು ಎಚ್ಚರವಹಿಸಬೇಕು. ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು. ಸಂಚಾರಿ ನಿಯಮ ಉಲ್ಲಂಘನೆಯ ಕಾರಣಕ್ಕಾಗಿ ಮಂಗಳೂರು ನಗರದಲ್ಲಿ ಕಳೆದ ವರ್ಷ 1500ಕ್ಕೂ ಅಧಿಕ ವಾಹನ ಚಾಲನೆ ಪರವಾನಿಗೆಯನ್ನು ಅಮಾನತು ಮಾಡಲಾಗಿದೆ. ಈ ವರ್ಷ 36 ಆಗಿದೆ. ಒಮ್ಮೆ ಡಿಎಲ್ ಅಮಾನತುಗೊಂಡರೆ ಮತ್ತೆ ಅಂತವರಿಗೆ 6 ತಿಂಗಳುಗಳ ಕಾಲ ವಾಹನ ಚಾಲನೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಮುಂದಿನ ವರ್ಷ ಅಪಘಾತಗಳು ನಡೆಯುವುದನ್ನು ಇನ್ನಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿ ಸಲಾಗಿದೆ ಎಂದರು.
ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ವಂ.ರಿಚರ್ಡ್ ಎಲೋಶಿಯಸ್ ಕುವೆಲ್ಲೊ ,ಉಪಪೊಲೀಸ್ ಆಯುಕ್ತರಾದ ಬಿ.ಪಿ.ದಿನೇಶ್ ಕುಮಾರ್ ಮತ್ತು ಎಸ್.ವೈ ಪಾಟೀಲ್, ಟ್ರಾಫಿಕ್ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.
ಪ್ರವೀಣ್ ಚಂದ್ರ ಶೆಟ್ಟಿ ಟ್ರಾಫಿಕ್ ನಿಯಮಗಳ ಬಗ್ಗೆ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ಸಾರಿಗೆ ಆಯುಕ್ತ ಶ್ರೀ ಧರ್ ಮಲ್ಲಾಡ್ ರಸ್ತೆ ಅಪಘಾತ ವನ್ನು 2030 ವೇಳೆಗೆ ಶೇ.50ರಷ್ಟು ಕಡಿಮೆ ಮಾಡುವ ಉದ್ದೇಶಕ್ಕಾಗಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಕೈಗೊಳ್ಳಲಾಗಿದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು. ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊರತರಲಾದ ಕೈಪಿಡಿ ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ರಾಷ್ಟ್ರಪತಿ ಪದಕ ಪಡೆದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮಣಿಕಾಂತ ಮಂದಾರಬೈಲು,ಮುಖ್ಯಮಂತ್ರಿ ಪದಕ ಪಡೆದ ಸಂತೋಷ್ ಕುಮಾರ್ ಪಡೀಲ್, ಅತ್ಯುತ್ತಮ ಸೇವೆ ನೀಡಿರುವ ಕಂಟ್ರೋಲ್ ರೂಮ್‌ನ ಪೊಲೀಸ್ ಸಿಬ್ಬಂದಿ ರಮಾನಂದ ಸುವರ್ಣ, ರುಕ್ಮಯ.ಜೆ ಮತ್ತು ಯುವರಾಜ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎಆರ್ ಟಿಒ ವಿಶ್ವನಾಥ ನಾಯಕ್ ಸ್ವಾಗತಿಸಿದರು,ಅಕ್ಷತಾ ಶೆಣೈ ಮತ್ತು ಆರ್ ಜೆ ಅಭಿಜಿತ್ ಕಾರ್ಯಕ್ರಮ ನಿರೂಪಿಸಿದರು.







