ಕೊಣಾಜೆ: ಬ್ಯಾಂಕ್ ಠೇವಣಿಯ ಅಕ್ರಮ ವರ್ಗಾವಣೆ; ಆರೋಪ

ಸಾಂದರ್ಭಿಕ ಚಿತ್ರ
ಮಂಗಳೂರು: ಕೊಣಾಜೆಯ ಬ್ಯಾಂಕ್ವೊಂದರಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದ ಹಲವು ಗ್ರಾಹಕರ ಖಾತೆಯಿಂದ ಹಣವನ್ನು ಅಕ್ರಮವಾಗಿ ಬೇರೆಯವರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಬುಧವಾರ ಗ್ರಾಹಕರು ಬ್ಯಾಂಕ್ನ ಮುಂದೆ ಜಮಾಯಿಸಿ ಆತಂಕ ವ್ಯಕ್ತಪಡಿಸಿದ ವಿದ್ಯಮಾನ ನಡೆದಿದೆ.
ಅಲ್ಲದೆ ಬ್ಯಾಂಕ್ನ ಮ್ಯಾನೇಜರ್ ಕೆಲವು ದಿನಗಳಿಂದ ಬ್ಯಾಂಕ್ನಲ್ಲಿ ಹಾಜರಿರದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಹಣವನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾಯಿಸಲಾಗಿದೆ ಎಂಬ ಆರೋಪದಿಂದ ಕಂಗಾಲಾಗಿರುವ ಗ್ರಾಹಕರು ಬ್ಯಾಂಕ್ನ ಮುಂದೆ ಜಮಾಯಿಸಿ ವಿಚಾರಿಸಿದ್ದಾರೆ.
ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಬ್ಯಾಂಕ್ನಲ್ಲಿಡಲಾಗಿದ್ದ ಫಿಕ್ಸೆಡ್ ಡೆಪಾಸಿಟ್ ವಾಪಸ್ ಪಡೆಯಲು ಹೋದಾಗ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ವಿಷಯ ಬೆಳಕಿಗೆ ಬಂತು ಎನ್ನಲಾಗಿದೆ. ಬಳಿಕ ಹಲವು ಮಂದಿ ಪರಿಶೀಲಿಸಿದಾಗ ತಾವು ಮೋಸ ಹೋಗಿರುವುದು ಬೆಳಕಿಗೆ ಬಂತು ಎಂದು ಹೇಳಲಾಗಿದೆ.
ಗ್ರಾಹಕರು ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ ಸಿಬ್ಬಂದಿಯು ಬೇರೆ ಬೇರೆ ರೀತಿಯ ಸಬೂಬು ನೀಡಿದ್ದು, ಇದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಹಲವು ಸಿಬ್ಬಂದಿ ಕೂಡಾ ಫಿಕ್ಸೆಡ್ ಡಿಪಾಸಿಟ್ ಇಟ್ಟಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಗ್ರಾಹಕರು, ಬ್ಯಾಂಕಿನ ಅಧಿಕಾರಿಗಳು ಹೇಳಿಕೆ ನೀಡಲು ನಿರಾಕರಿಸಿದ್ದಾರೆ.







