ಕೆರೆಕಟ್ಟೆ ಪುಣ್ಯಕ್ಷೇತ್ರದಲ್ಲಿ ಸಂತ ಅಂತೋನಿ ಪವಿತ್ರ ಶರೀರದ ಮಹೋತ್ಸವ

ಕುಂದಾಪುರ: ಹೊಸಂಗಡಿ ಸಮೀಪದ ಕೆರೆಕಟ್ಟೆ ಪುಣ್ಯಕ್ಷೇತ್ರದಲ್ಲಿ ಸಂತ ಅಂತೋನಿಯವರ ಪವಿತ್ರ ಶರೀರದ ಮಹೋತ್ಸವದ ಆಚರಣೆ ಗುರುವಾರ ವಿಜೃಂಭಣೆಯಿಂದ ಜರಗಿತು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಹೋತ್ಸವದ ಪವಿತ್ರ ಬಲಿಪೂಜೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ತಮ್ಮ ಸಂದೇಶದಲ್ಲಿ ಅವರು, ಸಂತ ಅಂತೋನಿ ಯವರು ಪ್ರಾರ್ಥನೆಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು ಪುಣ್ಯಕ್ಷೇತ್ರದಲ್ಲಿ ಕೂಡ ಪ್ರತಿನಿತ್ಯ ಎಂಬಂತೆ ಭಕ್ತಾದಿಗಳು ಜಾತಿ ಮತ ಭೇದ ವನ್ನು ಬಿಟ್ಟು ಬಂದು ತಮ್ಮ ಕೋರಿಕೆಗಳನ್ನು ಸಂತ ಅಂತೋನಿಯವರಿಗೆ ಸಲ್ಲಿಸುತ್ತಾರೆ. ಪುಣ್ಯಕ್ಷೇತ್ರದಲ್ಲಿ ನಿರ್ಗತಿಕರಿ ಗಾಗಿಯೇ ಆಶ್ರಮದ ಯೋಜನೆಯನ್ನು ಕೈಗೊಂಡಿದ್ದು ಉದಾರ ದಾನಿಗಳ ನೆರವಿನಿಂದ ಪೂರ್ಣಗೊಳ್ಳಬೇಕಾಗಿದೆ. ಈ ಆಶ್ರಮದಲ್ಲಿ ನಿರ್ಗತಿಕರಿಗೆ ವಾಸದ ಅವಕಾಶ ಆದಷ್ಟು ಬೇಗ ಲಭಿಸುವಂತಾಗಲಿ ಅಲ್ಲದೆ ಪ್ರತಿಯೊಬ್ಬರು ತಮ್ಮ ತಮ್ಮ ದೈನಂದಿನ ಜೀವನದಲ್ಲಿ ಪ್ರಾರ್ಥನೆ ಮೊದಲ ಆದ್ಯತೆ ನೀಡುವಂತೆ ಕರೆ ನೀಡಿದರು.
ಮಹೋತ್ಸವದ ಸಂದೇಶವಾದ ದೇವರೇ ನಮಗೆ ಪ್ರಾರ್ಥಿಸಲು ಕಲಿಸಿರಿ ಎಂಬ ವಿಷಯದ ಮೇಲೆ ಪ್ರವಚನ ನೀಡಿದ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ, ಪ್ರಾರ್ಥನೆ ಮನುಷ್ಯನ ಆಧ್ಯಾತ್ಮಿಕ ಜೀವನಕ್ಕೆ ಆಮ್ಲಜನಕವಿದ್ದಂತೆ ಸಂತ ಅಂತೋನಿಯವರಿಗೆ ಅದು ದೇವರೊಂದಿಗಿನ ಮಾಡಿಕೊಂಡ ಸಂಬಂಧ ಹಾಗೂ ಪ್ರೀತಿಯ ಸಂಭಾಷಣೆಯಾಗಿತ್ತು. ಪ್ರಾರ್ಥನೆ ದೇವರಿಗೆ ದೀನರಾಗಿ ಅರ್ಪಿಸುವ ಪೂಜೆ ಯಾಗಿದ್ದು ಈ ಮೂಲಕ ದೇವರಲ್ಲಿ ನಮ್ಮ ಬದುಕಿಗೆ ಉತ್ತಮ ಮಾರ್ಗ ದರ್ಶನವನ್ನು ಕೋರುವುದಾಗಿದೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ವಂ.ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಸ್ಟ್ಯಾನಿ ತಾವ್ರೊ ಸೇರಿದಂತೆ ಹಲವಾರು ಧರ್ಮಗುರುಗಳು ಹಾಗೂ ಸಾವಿರಾರು ಮಂದಿ ಭಕ್ತಾದಿಗಳು ಮಹೋತ್ಸವದಲ್ಲಿ ಭಾಗವಹಿಸಿದ್ದರು. ಪುಣ್ಯಕ್ಷೇತ್ರದ ನಿರ್ದೇಶಕ ವಂ.ಸುನೀಲ್ ವೇಗಸ್ ವಂದಿಸಿದರು. ಪವಿತ್ರ ಬಲಿ ಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಕನ್ನಡ ಭಾಷೆಯಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಗುರು ವಂ.ಲೋರೆನ್ಸ್ ಡಿಸೋಜ ಪವಿತ್ರ ಬಲಿಪೂಜೆ ಯನ್ನು ನೆರವೇರಿಸಿದರು.







