ಅನುದಾನಿತ ಶಾಲಾ ಶಿಕ್ಷಕರಿಗೂ ಹಳೆ ಪಿಂಚಣಿ ಸೌಲಭ್ಯ ವಿಸ್ತರಣೆಗೆ ಹರೀಶ್ ಆಚಾರ್ಯ ಆಗ್ರಹ
ಮಂಗಳೂರು: ಹಳೆಯ ಪಿಂಚಣಿ ಯೋಜನೆಯ (OPS) ಸೌಲಭ್ಯವನ್ನು 2006ರ ಎಪ್ರಿಲ್ 1ರ ಮೊದಲು ಅಧಿಸೂಚಿತ ಗೊಂಡು ಬಳಿಕ ನೇಮಕಾತಿಯನ್ನು ಪಡೆದ ಎಲ್ಲಾ ಸರಕಾರಿ ನೌಕರರಿಗೆ ಅನ್ವಯಗೊಳಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಆರ್. ಹರೀಶ್ ಆಚಾರ್ಯ ಆಗ್ರಹಿಸಿದ್ದಾರೆ.
ಹಳೆಯ ಪಿಂಚಣಿ ವ್ಯವಸ್ಥೆಗೆ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ಅರ್ಹ ಶಿಕ್ಷಕರಿದ್ದಾರೆ. ನಿಗದಿಪಡಿಸಿದ ದಿನಾಂಕದ ಮೊದಲಿನಿಂದಲೇ ಹಲವಾರು ಖಾಸಗಿ ಅನುದಾನಿತ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಜಾರಿಯಲ್ಲಿದೆ. ನಂತರ ನೇಮಕಾತಿಯನ್ನು ಹೊಂದಿದ ಅರ್ಹ ಶಿಕ್ಷಕರೂ ಇದ್ದಾರೆ. ಇಂತಹ ಶಿಕ್ಷಕರು ಹಳೆಯ ಪಿಂಚಣಿ ವ್ಯವಸ್ಥೆಗೆ ಸಹಜವಾಗಿ ಅರ್ಹತೆ ಉಳ್ಳವರಾಗಿದ್ದಾರೆ. ಇದು ಸರಕಾರಕ್ಕೆ ಹೆಚ್ಚು ಆರ್ಥಿಕ ವೆಚ್ಚದಾಯಕವೂ ಅಲ್ಲ. ಆದುದರಿಂದ ಅಂತಹವರಿಗೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನ್ವಯಿಸಿ ರಾಜ್ಯ ಸರಕಾರವು ಎಲ್ಲರಿಗೂ ಸಹಜ ನ್ಯಾಯವನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.





