ಮಂಗಳೂರು ವಿಶ್ವ ವಿದ್ಯಾನಿಲಯ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘದ ವಿಶೇಷ ಸಭೆ

ಮಂಗಳೂರು: ರಾಜ್ಯಶಾಸ್ತ್ರವನ್ನು ಬೋಧಿಸುವ ಅಧ್ಯಾಪಕರು ಅಧ್ಯಯನದ ವಿಷಯದಲ್ಲಿ ಆಗುವ ಇತ್ತೀಚಿನ ವಿದ್ಯಮಾನ ಗಳ ಸೂಕ್ಷ್ಮ ತಿಳಿದುಕೊಳ್ಳುವುದರ ಜೊತೆಗೆ ಸರಕಾರದ ನೀತಿ ಯೋಜನೆಗಳನ್ನು ಗಮನಿಸಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮೀನ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಇತ್ತೀಚೆಗೆ ಮಂಗಳೂರಿನ ಬೆಸೆಂಟ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ವಾರ್ಷಿಕ ಸಭೆ ಮತ್ತು ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಪ್ರಧಾನ ಭಾಷಣ ಮಾಡಿದರು.
ಹೆಚ್ಚು ವಿಚಾರ ಸಂಕಿರಣ, ಕಾರ್ಯಗಾರಗಳನ್ನು ಆಯೋಜಿಸುವುದರ ಮೂಲಕ ರಾಜ್ಯಶಾಸ್ತ್ರ ವಿಭಾಗವನ್ನು ಮತ್ತಷ್ಟು ಬಲ ಗೊಳಿಸಿ, ಜನಪರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಭಾರತದ ಸಂವಿಧಾನವನ್ನು ರಾಜ್ಯಶಾಸ್ತ್ರದ ಅಧ್ಯಾಪಕರೇ ಬೋಧಿಸಿದರೆ ಅದು ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಾಕಾರಿ ತಲುಪುತ್ತದೆ ಎಂದು ನುಡಿದರು.
ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಪಿ.ಎಲ್. ಧರ್ಮ ಮಾತನಾಡಿ ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವುದರಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರ ಪಾತ್ರ ಮಹತ್ವ ಪೂರ್ಣವಾಗಿದ್ದು, ಸಂವಿಧಾನ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಲಿಂಗ ಸಮಾನತೆ ಇತ್ಯಾದಿ ವಿಷಯಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕು ಎಂದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷ ಡಾ. ಶಾನಿ, ನೂತನ ಅಧ್ಯಕ್ಷ ಡಾ. ಪ್ರವೀಣ್ ಕೆ, ರಾಜ್ಯಶಾಸ್ತ್ರ ಪರೀಕ್ಷಾ ಮಂಡಳಿ ಅಧ್ಯಕ್ಷ, ಡಾ. ಶಬೀರ್ ಪಾಷ, ಕಾರ್ಯದರ್ಶಿ ಡಾ. ಗಣೇಶ್ ಶೆಟ್ಟಿ , ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರಾಧ್ಯಾಪಕ ಡಾ. ದಯಾನಂದ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಡಾ.ಗಣೇಶ್ ಶೆಟ್ಟಿ ಸ್ವಾಗತಿಸಿ, ಗತವರ್ಷದ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ವಿದ್ಯಾನಾಥ್ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು.







