ವಿಮಾ ಸಂಸ್ಥೆಯ ವಿರುದ್ಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು

ಮಂಗಳೂರು: ಚಿಕಿತ್ಸಾ ವೆಚ್ಚದ ಕ್ಲೇಮು ನಿರಾಕರಿಸಿದ ವಿಮಾ ಸಂಸ್ಥೆಯ ವಿರುದ್ಧ ದ.ಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ನೀಡಿದೆ. ಈ ತೀರ್ಪಿನಲ್ಲಿ ಬಡ್ಡಿ ಸಮೇತ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ.
ಮಂಗಳೂರಿನ ವಿವೇಕಾನಂದ ಪಡಿಯಾರ್ ವಿ. ಮತ್ತವರ ಪತ್ನಿ ಶಾಮಿನಿ ವಂದನಾ ಪಡಿಯಾರ್ ವಿಮಾ ಸಂಸ್ಥೆಯೊಂದರಲ್ಲಿ 5 ಲ.ರೂ. ಮೊತ್ತದ ವಿಮೆ ಮಾಡಿಸಿದ್ದರು. ಬಳಿಕ ಶಾಮಿನಿ ವಂದನಾ ಪಡಿಯಾರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಚಿಕಿತ್ಸೆಗೆ 5,09, 676 ರೂ. ವೆಚ್ಚವಾಗಿದ್ದು ವಿಮಾ ಮೊತ್ತವನ್ನು ಪಾವತಿಸುವಂತೆ ವಿಮಾ ಸಂಸ್ಥೆಯನ್ನು ಕೋರಿದ್ದರು. ಆದರೆ ಅವರಿಗೆ ಈ ಹಿಂದೆ ಕಾಯಿಲೆಗಳು ಇರುವುದನ್ನು ವಿಮೆ ಮಾಡುವಾಗ ಬಚ್ಚಿಡಲಾಗಿತ್ತು. ಹಾಗಾಗಿ ವಿಮೆ ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆಯು ವಾದಿಸಿತ್ತು. ಆದರೆ ತಾವು ಎಲ್ಲಾ ಮಾಹಿತಿ ನೀಡಿರುವುದಾಗಿ ಹೇಳಿಕೊಂಡ ಅರ್ಜಿದಾರರು ಗ್ರಾಹಕರ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದರು.
ಈ ಹಿಂದೆ ಕಾಯಿಲೆ ಇದ್ದುದನ್ನು ತಿಳಿಸದಿರುವ ದಾಖಲೆ ನೀಡಲು ವಿಮಾ ಸಂಸ್ಥೆ ವಿಫಲವಾಗಿತ್ತು. ಆ ಹಿನ್ನೆಲೆಯಲ್ಲಿ ಆಯೋ ಗವು ವಿಮಾ ಸಂಸ್ಥೆಯ ವಿರುದ್ಧ ತೀರ್ಪು ನೀಡಿದೆ. ಅಂದರೆ ವಿಮಾ ಸಂಸ್ಥೆಯು 5 ಲ.ರೂ.ಗೆ ಶೇ.8 ಬಡ್ಡಿ, ವ್ಯಾಜ್ಯದ ಖರ್ಚು ಮತ್ತು ಪರಿಹಾರವಾಗಿ 35,000 ರೂ. ಸಹಿತ 6,15,000 ರೂ. ಪಾವತಿಸುವಂತೆ ಆಯೋಗವು ಆದೇಶದಲ್ಲಿ ತಿಳಿಸಿದೆ.





