ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೊದಲು ಸಂವಿಧಾನವನ್ನು ಅರಿತುಕೊಳ್ಳಬೇಕು: ಆನಂದ್ ಸಿ.ಎಲ್.
ಸಂವಿಧಾನ ಜಾಥಾ ಸಮಾರೋಪ

ಮಂಗಳೂರು: ಸಾಮಾಜಿಕ ಜಾಲತಾಣಗಳಿಂದ ಪಡೆದ ಜ್ಞಾನದಿಂದ ರಾಷ್ಟ್ರ ನಿರ್ಮಾಣ ಅಸಾಧ್ಯ. ಹಾಗಾಗಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಮೊದಲು ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಹೇಳಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಸಂವಿಧಾನ ಜಾಥಾ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನ ಜಾಗೃತಿ ಜಾಥಾವು ಜಿಲ್ಲಾದ್ಯಂತ ಸಂಚರಿಸಿ ಸಂವಿಧಾನದ ಮಹತ್ವವನ್ನು ಸಾರಿದೆ. ಸಂವಿಧಾನವನ್ನು ಅರಿಯಬೇಕಾದರೆ ವಿದ್ಯಾರ್ಥಿಗಳು ಅದನ್ನು ನಿರಂತರವಾಗಿ ಅಧ್ಯಯನ ಮಾಡಬೇಕು. ಆಗ ಮಾತ್ರ ಸಮಸ್ಯೆಗಳನ್ನು ಎದುರಿಸಲು ಸಾಧ್ಯ, ಸಂವಿಧಾನವನ್ನು ಧರ್ಮಗ್ರಂಥದ ರೀತಿ ಗೌರವಿಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಸಂಧಾನ ವನ್ನು ಅರಿತು ಅರ್ಥೈಸಿಕೊಳ್ಳಬೇಕು ಎಂದು ಆನಂದ ಸಿ.ಎಲ್. ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಉಪನ್ಯಾಸಕ ಪ್ರದೀಪ್ ಸಂವಿಧಾನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ದಲಿತ ಸಂಘಟನೆಯ ಮುಖಂಡ ದೇವದಾಸ್ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ ಸ್ವಾಗತಿಸಿದರು. ಸಮಗ್ರ ಗಿರಿಜನ ಯೋಜನೆಯ ಸಮನ್ವಯ ಅಧಿಕಾರಿ ಶಿವಕುಮಾರ್ ವಂದಿಸಿದರು.





