ಅಡಿಕೆಯ ಅಕ್ರಮ ಆಮದು ತಡೆಯಲು ತುರ್ತು ಕ್ರಮಕ್ಕೆ ಪ್ರಧಾನಿಗೆ ಕ್ಯಾಂಪ್ಕೋ ಮನವಿ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ವಿದೇಶಿ ಅಡಿಕೆಯು ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದೆ. ಇದು ದೇಶಿ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತ ನೀಡುತ್ತಿದೆ. ಅಲ್ಲದೆ ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿ ದೇಶದ ಅಡಿಕೆ ಮಾರುಕಟ್ಟೆಯನ್ನು ನಾಶಗೊಳಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕ್ಯಾಂಪ್ಕೋ ಈ ಬಗ್ಗೆ ತುರ್ತು ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದೆ.
ಕ್ಯಾಂಪ್ಕೋದ ನಿರಂತರ ಪ್ರಯತ್ನದಿಂದ ಕೇಂದ್ರ ಸರಕಾರ ಇತ್ತೀಚಿಗೆ ಕನಿಷ್ಠ ಆಮದು ಬೆಲೆಯನ್ನು 1 ಕಿಲೋಗೇ 351 ರೂ. ನಿಗದಿಪಡಿಸಿತ್ತು. ಆದರೆ ಅಕ್ರಮ ಅಮದು ಅಡಿಕೆಯನ್ನು ವಶಪಡಿಸಿಕೊಂಡ ಕಷ್ಟಮ್ಸ್ ಅಥವಾ ಸಂಬಂಧಪಟ್ಟ ಇತರ ಇಲಾಖೆಯ ಅಧಿಕಾರಿಗಳು ನಡೆಸುವ ಹರಾಜಿನಲ್ಲಿ ಕನಿಷ್ಠ ಆಮದು ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವರ್ತಕರು ಖರೀದಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ ಎಂದು ತಿಳಿಸಿದೆ.
ಇಂಡೋನೇಷ್ಯಾ, ಬರ್ಮಾ ಮುಂತಾದ ದೇಶಗಳಿಂದ ಆಮದು ಆಗುವ ಅಡಿಕೆಯ ಗುಣಮಟ್ಟ ತುಂಬಾ ಕಳಪೆಯಾಗಿವೆ. ಇವು FSSAI ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವುದಿಲ್ಲ ಮತ್ತು ಮನುಷ್ಯನ ಉಪಯೋಗಕ್ಕೆ ಯೋಗ್ಯವಾ ಗಿರುವುದಿಲ್ಲ. ಆದುದರಿಂದ ವಶಪಡಿಸಿಕೊಂಡ ಅಡಿಕೆಯ ಗುಣಮಟ್ಟದ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲ ಯದಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕೆಂದು ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ ಕೊಡ್ಗಿ ಆಗ್ರಹಿಸಿದ್ದಾರೆ.





