ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

ಮಂಗಳೂರು: ನಗರದ ಸಂತ ಜೋಸೆಫ್ ಇಂಜಿನಿಯರಿಂಗ್‌ಕಾಲೇಜಿನ (ಎಸ್‌ಜೆಇಸಿ) 18ನೇ ಪದವಿ ಪ್ರದಾನ ಸಮಾ ರಂಭ ಶನಿವಾರ ನಡೆಯಿತು. ಸಮಾರಂಭದಲ್ಲಿ 2023ನೇ ಸಾಲಿನ 531 ಪದವಿಪೂರ್ವ ವಿದ್ಯಾರ್ಥಿಗಳು (ಬಿಇ) ಮತ್ತು 200 ಸ್ನಾತಕೋತ್ತರ ಪದವೀಧರರಿಗೆ (ಎಂಬಿಎ, ಎಂಸಿಎ ಮತ್ತು ಪಿಎಚ್‌ಡಿ) ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಜೆಐಎಸ್ ವಿಶ್ವವಿದ್ಯಾಲಯದ ಪ್ರೋ ಚಾನ್ಸಲರ್ ಡಾ. ನೀರಜ್ ಸಕ್ಸೆನಾ ಅತಿಥಿಯಾಗಿ ಭಾಗವಹಿಸಿ ಪದವೀಧರರಿಗೆ ಪದವಿ ಪ್ರಮಾಣ ಪತ್ರ ವಿತರಿಸಿದರು. ಮೈಕ್ರೊಸಾಫ್ಟ್ ಬೆಂಗಳೂರು ವಿಭಾಗದ ಕ್ಲೌಡ್ ಸೊಲ್ಯೂಶನ್ ಆರ್ಕಿಟೆಕ್ಟ್ ಮ್ಯಾನೇಜರ್ ಐರೊಲ್ ಮೆಲಿಶಾ ಪಿಂಟೊ ಅವರು ಈ ಸಂದರ್ಭದಲ್ಲಿ ಗೌರವ ಅತಿಥಿಯಾಗಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ಹಾಗೂ ಎಸ್‌ಜೆಇಸಿ ಅಧ್ಯಕ್ಷರಾದ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ವಹಿಸಿದ್ದರು.
ಕಾಲೇಜಿನ ನಿರ್ದೇಶಕರಾದ ವಂ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಸ್ವಾಗತಿಸಿದರು. ಕಾಲೇಜಿನ ಸ್ಟೂಡೆಂಟ್ ವೆಲ್ಫೆರ್ ಡೀನ್ ಡಾ.ರಮಾನಂದ ಎಚ್. ವಿ ಮುಖ್ಯ ಅತಿಥಿ ಮತ್ತು ಗೌರವ ಅತಿಥಿಗಳನ್ನು ಪರಿಚಯಿಸಿದರು. ಡಾ. ನೀರಜ್ ಸಕ್ಸೇನಾ ಅವರು ಮಾತನಾಡಿ, ಪದವೀಧರರನ್ನು ಅಭಿನಂದಿಸಿದರು ಮತ್ತು ಶಿಕ್ಷಣದ ಮಹತ್ವವನ್ನು ವಿವರಿಸಿದರು.
ಡಾ. ರಿಯೋ ಡಿಸೋಜಾಅವರು ಪದವಿ ಪ್ರಮಾಣ ವಚನ ಬೋಧಿಸಿದರು. 2023ರ ತರಗತಿಯ ಎಂಬಿಯ ವಿಭಾಗದ ಪದವೀಧರರಾದ ಅಕ್ಷತಾ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಇಂಜಿನಿಯರಿಂಗ್ ವಿಭಾಗದ ಮಹಮ್ಮದ್ ಕೈಫ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ವಿವಿಧ ಸಾಧಕರಿಗೆ ಮಂಗಳೂರಿನ ಬಿಷಪ್ ಮತ್ತು ಎಸ್‌ಜೆಇಸಿ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಎಸ್‌ಜೆಇಸಿಯ ಸಹಾಯಕ ನಿರ್ದೇಶಕ ವಂ. ಫಾ. ಕೆನಿತ್ ಕ್ರಾಸ್ತಾ, ಉಪಪ್ರಾಂಶುಪಾಲರಾದ ಡಾ. ಪುರುಷೋತ್ತಮ ಚಿಪ್ಪಾರ್, ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ರಾಕೇಶ್ ಲೋಬೋ ಮತ್ತು ಕಾರ್ಯಕ್ರಮದ ಸಹ ಸಂಚಾಲಕ ರಮ್ಯಾ ಎಂ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಮಂಜುನಾಥ್ ಬಿ ವಂದಿಸಿದರು. ಪ್ರೀತಾ ಡಿಸೋಜಾ ಮತ್ತು ಡೆವರ್ ಜೋನ್ ಡಿಸೋಜಾ ಕಾರ್ಯಕ್ರಮವನ್ನು ನಿರ್ವಹಿಸಿದರು.







