ಸುಳ್ಳುಗಳ ಮಧ್ಯೆ ಸತ್ಯ ಮರೆಮಾಚದಿರಲಿ: ಪುರುಷೋತ್ತಮ ಬಿಳಿಮಲೆ
ಫಾತಿಮಾ ರಲಿಯಾರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನ ಬಿಡುಗಡೆ

ಮಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಮುಸ್ಲಿಮರು ಪ್ರಾಣ ತ್ಯಾಗಮಾಡಿದ್ದಾರೆ. ಆದರೆ ಪ್ರಸಕ್ತ ಆಡಳಿತ ವ್ಯವಸ್ಥೆಯು ಅದನ್ನು ಮರೆಮಾಚುವ ಪ್ರಯತ್ನ ಮಾಡುತ್ತಿವೆ. ಸುಳ್ಳುಗಳ ಮಧ್ಯೆ ಸತ್ಯವೂ ಮರೆಮಾಚಲ್ಪಡುತ್ತಿವೆ. ಆ ಸತ್ಯವು ಎಂದಿಗೂ ಮರೆಮಾಚದಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಹಿಂದಿಗಿಂತ ಈಗ ಬರೆಯುವ ಅನಿವಾರ್ಯತೆ ಇದೆ ಎಂದು ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಉಡುಗೊರೆ ಪ್ರಕಾಶನ ಪ್ರಕಟಿಸಿದ, ಕವಯತ್ರಿ ಫಾತಿಮಾ ರಲಿಯಾ ರಚಿಸಿದ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನವನ್ನು ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇಶವನ್ನು ಸುಮಾರು 600 ವರ್ಷಗಳ ಕಾಲ ಮುಸ್ಲಿಮರು ಆಳಿದರು. ಆದರೆ, ಅವರು ಎಂದೂ ಕೂಡ ಸಂಪತ್ತನ್ನು ದೋಚ ಲಿಲ್ಲ. ಇಲ್ಲೇ ಮರಣವನ್ನಪಿರುವುದು ಇತಿಹಾಸ. ದೇಶದ ಶೇ.24ರಷ್ಟು ಹಿಂದೂಗಳು ಆರ್ಥಿಕವಾಗಿ ಹಿಂದುಳಿದಿದ್ದರೆ, ಮುಸ್ಲಿಮರು ಅದಕ್ಕಿಂತಲೂ ಹೆಚ್ಚು ಅಂದರೆ ಶೇ.38ರಷ್ಟು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಮುಸ್ಲಿಮರು ಸಂಪತ್ತನ್ನು ದೋಚಿದ್ದರೆ ಹಿಂದೂಗಳಿಗಿಂತ ಮುಸ್ಲಿಮರು ಆರ್ಥಿಕವಾಗಿ ಸಬಲರಾಗಬೇಕಿತ್ತು. ಅಂತಹ ಕಹಿಸತ್ಯವನ್ನು ಬಹಿರಂಗಪಡಿ ಸಬೇಕಿದೆ. ಅದಕ್ಕಾದರೂ ಮುಸ್ಲಿಮರು ಬರವಣಿಗೆಯಲ್ಲಿ ಸಕ್ರಿಯರಾಗಬೇಕಿದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
ಝಾನ್ಸಿರಾಣಿ ಲಕ್ಷ್ಮಿಬಾಯಿಯನ್ನು ಗಲ್ಲಿಗೇರಿಸುವಾಗ ಮುಝಫರ್ ನಗರದ ಹಬೀಬಾರನ್ನು ಕೂಡ ಗಲ್ಲಿಗೇರಿಸಲಾಗಿತ್ತು. ಅಸ್ಗರಿ ಬೇಗಂ ಅವರನ್ನು ಬೆಂಕಿಗೆ ಹಾಕಿ ಕೊಲ್ಲಲಾಯಿತು. ಆದರೆ ಆ ಸತ್ಯಾಂಶವನ್ನು ಮರೆಮಾಚಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಅಳಿಸಿ ಹಾಕಲಾಗುತ್ತಿದೆ ಎಂದ ಪುರುಷೋತ್ತಮ ಬಿಳಿಮಲೆ, ಬ್ರಿಟಿಷರ ಮೊದಲ ಶತ್ರು ಮುಸ್ಲಿಮರಾಗಿದ್ದರು. ಅವರನ್ನು ಆಡಳಿತ ವ್ಯವಸ್ಥೆಯಿಂದಲೂ ಬದಿಗೆ ಸರಿಸಲಾಯಿತು. ಆದರೆ ಹಿಂದೂಗಳು ವಿದೇಶದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಬ್ರಿಟಿಷ್ ಆಡಳಿತದ ಭಾಗವಾದರು. ದೇಶದ ಉಳಿವಿಗೆ ಮುಸ್ಲಿಮರ ಪಾತ್ರ ಅಪಾರವಾಗಿದ್ದರೂ ಕೂಡ ಮುಸ್ಲಿಮರನ್ನು ಸದಾ ದೇಶದ್ರೋಹಿಗಳನ್ನಾಗಿ ಚಿತ್ರಿಸಲಾಗುತ್ತಿದೆ ಎಂದರು.
ದೇಶದ ಮುಸ್ಲಿಮರು ಉರ್ದು, ಹಿಂದಿ, ಇಂಗ್ಲಿಷ್, ಬಂಗಾಳಿ, ಗುಜರಾತಿ, ಕನ್ನಡ ಸಹಿತ ನಾನಾ ಭಾಷೆಗಳಲ್ಲಿ ಬರೆಯುತ್ತಿ ದ್ದಾರೆ. ಇದು ನಮ್ಮ ಭಾಗ್ಯವಾಗಿದೆ. ಫಾತಿಮಾ ರಲಿಯಾ ಕೂಡ ಕನ್ನಡದಲ್ಲಿ ಬರೆಯುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಪುರುಷೋತ್ತಮ ಬಿಳಿಮಲೆ ನುಡಿದರು.
ಕಥೆಗಾರ್ತಿ ಸುಧಾ ಆಡುಕಳ ಕೃತಿಯನ್ನು ಪರಿಚಯಿಸಿದರು. ಕವಯತ್ರಿ ಫಾತಿಮಾ ರಲಿಯಾ ಹೆಜಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕಿ ಉಮೈರತ್ ಕುಮೇರು ಸ್ವಾಗತಿಸಿದರು. ಕವಿಗಳಾದ ವಿಲ್ಸನ್ ಕಟೀಲ್ ಮಾತನಾಡಿದರು. ಮುಆದ್ ಜಿ.ಎಂ. ಕವನ ವಾಚಿಸಿದರು. ಪತ್ರಕರ್ತ ಎಚ್.ಎಂ. ಪೆರ್ನಾಳ್ ಕಾರ್ಯಕ್ರಮ ನಿರೂಪಿಸಿದರು.







