ಮಂಗಳೂರು: ಮೆಗಾ ಬೈಬಲ್ ಸಮಾವೇಶ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಸೇವಾ ಕಮ್ಯುನಿಯನ್ (ಎಂಡಿಎಸ್‌ಸಿ) ಮತ್ತು ಬೈಬಲ್ ಆಯೋಗವು ಮಂಗಳೂರಿನ ಕಾರ್ಡೆಲ್ ಹೋಲಿ ಕ್ರಾಸ್ ಚರ್ಚ್ ಮೈದಾನದಲ್ಲಿ ನಡೆಯುತ್ತಿರುವ ಮೆಗಾ ಬೈಬಲ್ ಸಮಾವೇಶದ ಮೆಗಾ ಬೈಬಲ್ ಕನ್ವೆನ್ಶನ್‌ನ ಮೂರನೇ ದಿನದಂದು ನೆರೆದ ಭಕ್ತ ಸಮೂಹಕ್ಕೆ ಆಳವಾದ ಆಧ್ಯಾತ್ಮ ಚಿಂತನೆಯ ಉದ್ದೀಪನಕ್ಕೆ ಸಾಕ್ಷಿಯಾಯಿತು.
ಫೆಬ್ರವರಿ 22ರಂದು ಪ್ರಾರಂಭಗೊಂಡ ಸಮ್ಮೇಳನವು ರವಿವಾರ ಕೊನೆಗೊಳ್ಳಲಿದೆ. ಕೇರಳದ ಡಿವೈನ್ ರಿಟ್ರೀಟ್ ಸೆಂಟರ್‌ನಿಂದ ರೆ.ಫಾ. ಜೋಸೆಫ್ ಎಡಟ್ಟು ವಿ.ಸಿ. ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಮಾವೇಶನದಲ್ಲಿ ದೇವರ ಸ್ತುತಿ ಸ್ತೋತ್ರ, ವಿಮೋಚನೆಯ ಪ್ರಾರ್ಥನೆಗಳು, ಸಾಮೂಹಿಕ ಪೂಜೆ-ಆರಾಧನೆ ಗಳಿಂದ ಕೂಡಿದೆ.
ಎಂಡಿಎಸ್‌ಸಿಯ ಕಾರ್ಯದರ್ಶಿ ಬ್ಲಾಸಮ್ ರೇಗೊ ನೇತೃತ್ವದಲ್ಲಿ ಸ್ತುತಿ ಸ್ತೋತ್ರ ಗಾಯನ ಮೂರನೇ ದಿನದ ಕಾರ್ಯಚಟುವಟಿಕೆಗಳಿಗೆ ಸ್ಫೂರ್ತಿ ನೀಡಿತು. ಮೂರನೆ ದಿನದ ಮಹಾಪೂಜೆಯನ್ನು ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠ ಗುರು ಆತೀ ವಂದನೀಯ ಗುರು ಮ್ಯಾಕ್ಸಿಮ್ ನೊರೊನ್ಹಾ ಇತರ ಧರ್ಮಗುರುಗಳೊಂದಿಗೆ ನೆರವೇರಿಸಿದರು.
ವಂದನೀಯ ಮ್ಯಾಕ್ಸಿಮ್ ನೊರೊನ್ಹಾ ಧರ್ಮೋಪದೇಶದಲ್ಲಿ, ಸುವಾರ್ತೆಯಲ್ಲಿ ಚಿತ್ರಿಸಲಾದ ಪರ್ವತ ಅನುಭವದ ಸಾರ ವನ್ನು ಬೋಧಿಸಿದರು. ನಮ್ಮ ಅಚಲವಾದ ಬದ್ಧತೆ, ಉತ್ಸಾಹದ ಪ್ರಾರ್ಥನೆ ಮತ್ತು ದೃಢವಾದ ನಂಬಿಕೆಯ ಮೂಲಕ ನಾವು ಆಧ್ಯಾತ್ಮಿಕ ಜ್ಞಾನೋದಯದ ಪರ್ವತವನ್ನು ಏರುತ್ತೇವೆ. ಈ ನಿಟ್ಟಿನಲ್ಲಿ ಈ ಬೈಬಲ್ ಸಮ್ಮೇಳನವು ಆಶಾದಾಯಕವಾಗಿದೆ ಎಂದು ಹೇಳಿದರು.
ಎಂಡಿಎಸ್‌ಸಿಯ ಆಧ್ಯಾತ್ಮದ ನಿರ್ದೇಶಕ ಫಾ.ಕ್ಲಿಫರ್ಡ್ ಫೆರ್ನಾಂಡಿಸ್, ಬೈಬಲ್ ಕಮಿಷನ್‌ನ ಡಯೋಸಿಸನ್ ಡೈರೆಕ್ಟರ್ ಫಾ.ವಿಸೆಂಟ್ ಸಿಕ್ವೇರಾ, ಕಾರ್ಯಕ್ರಮದ ಸಂಯೋಜಕ ಕೆವನ್ ಡಿಸೋಜ ಮತ್ತು ಕೊರ್ಡೆಲ್ ಚರ್ಚ್‌ನ ಪಾಲನಾ ಪರಷತ್‌ನ ನೇತೃತ್ವದಲ್ಲಿ ಸಮಾವೇಶ ನಡೆಯಿತು.
ಸಹೋದರ ಜೆರೆಮಿಯಾ, ಕ್ರಿಸ್ಟೋಫರ್ ಮತ್ತು ಅರುಣ್ ಲೋಬೋ ನೇತೃತ್ವದಲ್ಲಿ ಉತ್ಸಾಹಭರಿತ ಸ್ತುತಿ ಸ್ತೋತ್ರ ಆರಾಧನೆ ನಡೆಯಿತು. ಕಾರ್ಡೆಲ್ ಚರ್ಚ್ ಗಾಯಕ ತಂಡವು ಗಾಯನದಲ್ಲಿ ಸೇರಿಕೊಂಡಿತು.
ರೆ.ಫಾ.ಎಡಟ್ಟು ವಿ.ಸಿ ಪ್ರಾರ್ಥಿಸಿದರು. ರೆ.ಫಾ.ಎಡಟ್ಟು ಅವರಿಗೆ ಫಾ.ಬಾಸಿಲ್ ವಾಸ್ ಮತ್ತು ಫಾ.ಪ್ರವೀಣ್ ಲಿಯೊ ಲಸ್ರಾದೋ ಭಾಷಾಂತರಕಾರರಾಗಿದ್ದರು.







