ಹರೇಕಳ: ರಕ್ತದಾನ ಶಿಬಿರ ಉದ್ಘಾಟನೆ

ಕೊಣಾಜೆ: ಹರೇಕಳ ಯುವ ಕಾಂಗ್ರೆಸ್ ವತಿಯಿಂದ ಯೇನೆಪೊಯ ಆಸ್ಪತ್ರೆಯ ರಕ್ತನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರವು ಹರೇಕಳ ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ರವಿವಾರ ನಡೆಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ. ಮಾತನಾಡಿ, ಕಳೆದ ಬಾರಿ ಇಲ್ಲಿಯ ಮಸೀದಿಯೊಂದರಲ್ಲಿ ನಡೆದ ಶಿಬಿರದಲ್ಲಿ 198 ಯೂನಿಟ್ ರಕ್ತ ನೀಡಲಾಗಿದ್ದು ಇದರಿಂದ ಸಾಕಷ್ಟು ರೋಗಿಗಳಿಗೆ ಅನುಕೂಲ ಆಗಿದೆ. ಮುಂದಕ್ಕೂ ರೋಗಿಗಳಿಗೆ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ಶಿಬಿರ ನಿರಂತರ ನಡೆಯಬೇಕು ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಮಾತನಾಡಿ, ಯುವಕರು ಮುಂದೆ ನಿಂತು ಕೆಲಸ ಮಾಡಿದಾಗ ಗ್ರಾಮದ ಅಭಿವೃದ್ಧಿಗೆ ಪೂರಕ. ರಾಜಕೀಯ ಸಂಘಟನೆಯಾಗಿ ಕಾರ್ಯನಿರ್ವಹಿಸುವಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಕ್ಕೆ ಪ್ರಯತ್ನಿಸಿದಾಗ ಸಂಘಟನೆ ಬಲಪಡಿಸಲು ಅನುಕೂಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಯುವಕಾಂಗ್ರೆಸ್ ಅಧ್ಯಕ್ಷ ಮುನೀರ್ ಆಲಡ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಸದಸ್ಯರಾದ ಅನಿತಾ ಡಿಸೋಜ, ಅಬ್ದುಲ್ ಸತ್ತಾರ್, ಅಬೂಬಕ್ಕರ್ ಸಿದ್ದೀಕ್, ಮಾಜಿ ಸದಸ್ಯ ಬಶೀರ್ ಉಂಬುದ, ರಕ್ತನಿಧಿ ಅಧೀಕ್ಷಕಿ ರಝಿಯಾ, ಡಾ.ಚಿನ್ಮಯಿ, ಕಾಂಗ್ರೆಸ್ ಮುಖಂಡ ಝಕರಿಯಾ ಮಲಾರ್, ಗುತ್ತಿಗೆದಾರ ಇಮ್ತಿಯಾಝ್, ಯವಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಸೈನಾರ್, ಸಾಮಾಜಿಕ ಜಾಲತಾಣ ವಿಭಾಗದ ಮನ್ಸೂರ್ ಕೊರಪಾದೆ, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು.







