ಎನ್ನೆಸ್ಸಸ್ ವಿದ್ಯಾರ್ಥಿಗಳಿಗೆ ಹಿರಿಯರ ‘ಯಶೋಗಾಥೆ’ ಪಾಠ
ಪೆರ್ಲದಲ್ಲಿ ನಡೆದ ವಿಶಿಷ್ಟ ಕಾರ್ಯಕ್ರಮ

ಪೆರ್ಲ : ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡು ಬದುಕಿನಲ್ಲಿ ಸಾಧನೆಯ ಉತ್ತುಂಗ ಶಿಖರವೇರಿದವರನ್ನು ಮತ್ತು ಇದೀಗ ಎನ್ನೆಸ್ಸಸ್ ವಿದ್ಯಾರ್ಥಿಗಳಾಗಿ ಜೀವನಾನುಭವದ ಪಾಠ ಕಲಿಯುತ್ತಿರು ವವನ್ನು ಒಂದಡೆ ಸೇರಿಸುವ ಮೂಲಕ ಅವರಿಗೆ ಸ್ಪೂರ್ತಿಯ ಸೆಲೆ ತುಂಬಿದ ಒಂದು ವಿಶಿಷ್ಟ ಕಾರ್ಯಕ್ರಮ ಶುಕ್ರವಾರ ರಾತ್ರಿ ಪೆರ್ಲದಲ್ಲಿ ನಡೆಯಿತು.
ಕಾಸರಗೋಡು ಸರಕಾರಿ ಕಾಲೇಜಿನ ಎನ್ನೆಸ್ಸಸ್ ಪೂರ್ವ ವಿದ್ಯಾರ್ಥಿ,ನಿವೃತ್ತ ನೊಂದಾವಣಾಧಿಕಾರಿ ಮೊಹಮ್ಮದಾಲಿ ಪೆರ್ಲ ಮತ್ತು ಪತ್ನಿ ಎಣ್ಮಕಜೆ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆ ಆಯಿಷಾ ಪೆರ್ಲ ಅವರು ತಮ್ಮ ಮನೆಯಂಗಳ ದಲ್ಲಿ ಏರ್ಪಡಿಸಿದ್ದ ಈ ಅಪೂರ್ವ ಕಾರ್ಯಕ್ರಮದಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಎನ್ನೆಸ್ಸಸ್ ವಿದ್ಯಾರ್ಥಿಗಳಿಗೆ ಒಂದೆಡೆ ಕಲೆತು ವಿದ್ಯಾರ್ಥಿ ಜೀವನದಲ್ಲಿ ಎನ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡು ವೃತ್ತಿ ಬದುಕಿನಲ್ಲಿ ಯಶಸ್ಸಿನ ಶಿಖರವೇರಿದ ಸಾಧಕರ ಬದುಕಿನ ಯಶೋಗಾಥೆ ಯನ್ನು ಅರಿಯುವ ಅವಿಸ್ಮರಣೀಯ ಅವಕಾಶ ಒದಗಿ ಬಂತು.
ಎನ್ನೆಸ್ಸಸ್ ಯೋಜನೆಗಳನ್ನು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ದು ಜನಸ್ನೇಹಿಯಾಗಿಸಿದ ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ಎನ್ನೆಸ್ಸಸ್ ಯೋಜನಾಧಿಕಾರಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ರತ್ನಾಕರ ಮಲ್ಲಮೂಲೆ, ಎನ್ನೆಸ್ಸಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪ್ರಾಂಶುಪಾಲ ಮುಹಮ್ಮದಾಲಿ, ಎನ್ನೆಸ್ಸಸ್ ನಿಕಟಪೂರ್ವ ವಿದ್ಯಾರ್ಥಿಗಳಾಗಿ ಸಾಧನೆಗೈದಿರುವ ವಿದ್ಯುತ್ ಇಲಾಖೆಯ ನಿವೃತ್ತ ಸಹಾಯಕ ಇಂಜಿನಿಯರ್ ರಝಾಕ್ ಪೆರ್ಲ, ಶಿಕ್ಷಕ ಆಶ್ರಫ್ ಮರ್ತ್ಯ,ಪತ್ರಕರ್ತ ಹಸನ್ ಬದಿಯಡ್ಕ ಈ ಸಂದರ್ಭದಲ್ಲಿ ಎನ್ನೆಸ್ಸಸ್‌ನ ಸ್ಪೂರ್ತಿದಾಯಕ ಜೀವನದ ನೆನಪುಗಳನ್ನು ಹಂಚಿಕೊಂಡರು.
ಭತ್ತದ ತಳಿ ಸಂರಕ್ಷಣೆಗಾಗಿ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾದ ಪ್ರಪ್ರಥಮ ಗಡಿನಾಡ ಕನ್ನಡಿಗ ಸತ್ಯನಾರಾಯಣ ಬೇಳೇರಿ ಅವರನ್ನು ಹಾಗೂ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ, ಪೆರ್ಲ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗುತ್ತಿರುವ ಬಿ.ರಾಜೇಂದ್ರ, ದುಬೈಯ ಸಂಘಟಕ ಹಸನ್ ಕುದ್ವ, ಮಂಜೇಶ್ವರ ಕಾಲೇಜಿನ ಎನ್ನೆಸ್ಸಸ್ ಯೋಜನಾಧಿಕಾರಿ ಅಜೇಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪ್ರಾಂಶುಪಾಲ ಮುಹಮ್ಮದಾಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಸೂದ್ ಪಳ್ಳಕಾನ, ಆಯಿಷಾ ಎ.ಎ.ಇಬ್ರಾಹಿಂ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
ಮೊಹಮ್ಮದಾಲಿ ಪೆರ್ಲ ಸ್ವಾಗತಿಸಿ, ನ್ಯಾಯವಾದಿ ಮೊಯ್ದು ಪೆರ್ಲ ವಂದಿಸಿದರು.







