ಬಂಟ್ವಾಳ: ಅಮೃತ್ ಭಾರತ್ ರೈಲ್ವೇ ಸ್ಟೇಷನ್‌ನ ಕಾಮಗಾರಿಗೆ ಶಿಲಾನ್ಯಾಸ

ಮಂಗಳೂರು: ಕೇಂದ್ರದಿಂದ 7,524 ಕೋಟಿ ರೂಪಾಯಿ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಈ ಬಾರಿ ಒದಗಿಸಲಾಗಿದೆ, ತನ್ನ ಕ್ಷೇತ್ರ ದಕ್ಷಿಣ ಕನ್ನಡದಲ್ಲಿ 2,650 ಕೋಟಿ ರೂ. ವೆಚ್ಚದ ರೈಲ್ವೆಗೆ ಸಂಬಂಧಿಸಿದ ಕಾಮಗಾರಿ ಈ ವರೆಗೆ ನಡೆದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
28.49 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಲಿರುವ ಬಂಟ್ವಾಳ ಅಮೃತ್ ಭಾರತ್ ರೈಲ್ವೇ ಸ್ಟೇಷನ್‌ನ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು
ಬಂಟ್ವಾಳದಲ್ಲಿ ಈ ಸಂದರ್ಭದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ‘ ಜಿಲ್ಲೆಯಲ್ಲಿ ರೈಲ್ವೆಯ ಅಭಿವೃದ್ಧಿಗೆ 10 ವರ್ಷಗಳಲ್ಲಿ 2650 ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊಟ್ಟಿದೆ. ಇದು ತನ್ನ ಪ್ರಯತ್ನದಿಂದ ಆಗಿದೆ. ಪಾಲ್ಘಾಟ್‌ನಿಂದ ಮಂಗಳೂರಿನ ಎಲೆಕ್ಟ್ರಿಫಿಕೇಶನ್ ಮುಗಿದಿದೆ. ಪುತ್ತೂರು ರೈಲ್ವೆ ನಿಲ್ದಾಣ ಆದರ್ಶ ಯೋಜನೆಯಡಿ ಅಭಿವೃದ್ಧಿಗೊಂಡರೆ, ಇಂದು ಬಂಟ್ವಾಳ ಮತ್ತು ಸುಬ್ರಹ್ಮಣ್ಯ ಸಂಪೂರ್ಣ ಬದಲಾಗಲಿದೆ. ನೇರಳಕಟ್ಟೆ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಅಳಪೆ ಪಡೀಲ್, ಜಪ್ಪು ಕುಡುಪಾಡಿ, ಮಹಾಕಾಳಿಪಡ್ಪು, ಪುತ್ತೂರು ಎಪಿಎಂಸಿ, ವಿವೇಕಾನಂದ ಕಾಲೇಜು ಬಳಿ ಮೇಲ್ಸೇತುವೆ ನಿರ್ಮಾಣ ಕಾರ್ಯಗಳಲ್ಲಿ ಹೆಚ್ಚಿನವು ಆಗಿದ್ದು, ಒಂದೆರಡು ಅಂತಿಮ ಹಂತದಲ್ಲಿದೆ. ವಂದೇ ಭಾರತ್ ರೈಲು ಮಂಗಳೂರಿಗೆ ಬಂದಿದೆ. ತಿರುವನಂತಪುರ ಕಾಸರಗೋಡು ರೈಲು ಈಗ ಮಂಗಳೂರಿಗೆ ವಿಸ್ತರಣೆಗೊಂಡಿದ್ದರೆ, ಗೋವಾ ಮಂಗಳೂರು ಸಂಪರ್ಕ ವಂದೇ ಭಾರತ್ ಆರಂಭವಾಗಿ ಜನಪ್ರಿಯತೆ ಗಳಿಸಿದೆ ಎಂದು ಅಭಿಪ್ರಾಯಪಟ್ಟರು.
ಚಾರ್ಮಾಡಿ ಘಾಟಿ ರಸ್ತೆ 350 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಮಾಣಿ ಮೈಸೂರು ರಸ್ತೆ ಅಭಿವೃದ್ಧಿ ಆಗಿದ್ದು, ಇನ್ನು ಚತುಷ್ಪಥವಾಗಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಯಾಗಿದೆ. ದೇಶದ ಏಕೈಕ ಪ್ಲಾಸ್ಟಿಕ್ ಪಾರ್ಕ್ ಮಂಗಳೂರಿನಲ್ಲಿದೆ. ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದ್ದು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸ ವೇಗ ಪಡೆದಿದೆ ಎಂದರು.
ಅಮೃತ ಭಾರತ್ ಯೋಜನೆಯಡಿ ಬಂಟ್ವಾಳ ರೈಲ್ವೆ ನಿಲ್ದಾಣ ಆಯ್ಕೆಯಾಗುವಲ್ಲಿ ಸಹಕರಿಸಿದ ಸಂಸದರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳದ ಜನತೆಯ ಪರವಾಗಿ ಅಭಿನಂದಿಸಿದರು
ರೈಲ್ವೆಯಲ್ಲಾಗುತ್ತಿರುವ ಬದಲಾವಣೆ ಹಾಗೂ ಭಾರತೀಯ ರೈಲ್ವೆ ಕುರಿತ ಮಾಹಿತಿಯನ್ನು ಭವಿಷ್ಯದ ಜನಾಂಗ ಪಡೆಯ ಬೇಕಾದ ಅಗತ್ಯವಿದೆ. ಈ ಕಾರಣದಿಂದ ಮಕ್ಕಳಿಗೆ ಪ್ರಬಂಧ ಸಹಿತ ಸ್ಪರ್ಧೆಗಳನ್ನು ಅಯೋಜಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಶ್ಲಾಘಿಸಿದರು.
ಈ ಸಂದರ್ಭ ರೈಲ್ವೆ ಡಿವಿಝನಲ್ ಇಂಜಿನಿಯರ್ ಸಾವನ್ ಕುಮಾರ್, ಅಸಿಸ್ಟೆಂಟ್ ಕಮರ್ಶಿಯಲ್ ಮ್ಯಾನೇಜರ್ ಉಮೇಶ್ ನಾಯಕ್ , ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಉಪಸ್ಥಿತರಿದ್ದರು
ಮೈಸೂರಿನ ಮೆಕ್ಯಾನಿಕಲ್ ವಿಭಾಗದ ಕವಿತಾ ಮತ್ತು ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ವಿಠಲ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳ ನೃತ್ಯ, ಸಾಂಸ್ಕೃೃತಿಕ ಕಾರ್ಯಕ್ರಮಗಳು ನಡೆದವು. ಶಾಲೆ, ಕಾಲೇಜು ಮಕ್ಕಳಿಗೆ ನಡೆಸಿದ ಪ್ರಬಂಧ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರೈಲ್ವೆ ಇಲಾಖೆಯ ಕುರಿತ ಮಾಹಿತಿಯನ್ನು ನೀಡಲಾಯಿತು.







