ಅಮೃತ ಸೋಮೇಶ್ವರರು ದ.ಕ.ಜಿಲ್ಲೆಯಲ್ಲಿ ಕೋಮು ಸಾಮರಸ್ಯದ ಪ್ರತೀಕವಾಗಿದ್ದರು: ವಾಸುದೇವ ಉಚ್ಚಿಲ್

ಮಂಗಳೂರು: ದಿವಂಗತ ಅಮೃತ ಸೋಮೇಶ್ವರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯದ ಪ್ರತಿಪಾದಕರು ಮತ್ತು ಪ್ರತೀಕವಾಗಿದ್ದರು ಎಂದು ಚಿಂತಕ ವಾಸುದೇವ ಉಚ್ಚಿಲ್ ತಿಳಿಸಿದ್ದಾರೆ.
ಉಳ್ಳಾಲದ ಕಲ್ಲಾಪು ಬಳಿ ಇರುವ ಯುನಿಟಿ ಸಭಾಂಗಣದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಶನ್ ನ 12ನೆ ರಾಜ್ಯ ಸಮ್ಮೇಳನದ ಎರಡನೆ ದಿನ ಸಂಜೆ ಅಮೃತ ಸೋಮೇಶ್ವರರ ಸ್ಮರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಡಾ.ಶಿವರಾಮ ಕಾರಂತರ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಸಾಹಿತ್ಯ ಚಟುವಟಿಕೆ ಯಲ್ಲಿ ತೊಡಗಿಸಿ ಕೊಂಡ ಮೇರು ವ್ಯಕ್ತಿತ್ವ ಅಮೃತ ಸೋಮೇಶ್ವರ ದ್ದಾಗಿದೆ. ಕುವೆಂಪು, ಗಾಂಧಿ ಪರಂಪರೆಯ ಹಾದಿಯಲ್ಲಿ ಸಾಗಿದ ಅಮೃತ ಸೋಮೇಶ್ವರರು ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಜಿಲ್ಲೆಯ ಕೋಮ ಸಾಮರಸ್ಯವನ್ನು ಎತ್ತಿ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೆಸರಿನ ವೇದಿಕೆಯಲ್ಲಿ ಡಿವೈಎಫ್ ಐ ಸಮ್ಮೆಳನ ನಡೆಯುತ್ತಿರುವುದು ಮತ್ತು ಸ್ಮರಣೆ ಯ ಕಾರ್ಯಕ್ರಮ ಅರ್ಥ ಪೂರ್ಣ ವಾಗಿದೆ ಎಂದವರು ತಿಳಿಸಿದ್ದಾರೆ.
ಕಲಾವಿದ ಮೈಮ್ ರಾಮದಾಸ್ ಹಾಗೂ ದಿವಾಕರ ಕಟೀಲ್ ಮತ್ತು ತಂಡದವರು ದಿ.ಅಮೃತ ಸೋಮೇಶ್ವರರ ಹಾಡುಗಳನ್ನು ಹಾಡಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.







