ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ: ಪ್ರಸನ್ನ ಕುಮಾರ್ ಮಾರ್ತ

ಪುತ್ತೂರು: ಬಿಜೆಪಿಯ ಮುಖಂಡರು ಹಾಗೂ ಸಂಘ ಪರಿವಾರದ ನಾಯಕರ ಜೊತೆ ನಡೆಸಲಾಗಿರುವ ಸಂದಾನವು ಫಲಪ್ರದವಾಗದಿರುವ ಹಿನ್ನಲೆಯಲ್ಲಿ ಸಂಘಟನೆಯ ಕಾರ್ಯಕರ್ತರ ನಿರ್ಧಾರದಂತೆ ಮುಂಬರುವ ಲೋಕಸಭಾ ಚುನಾವಣೆಯ ಸಹಿತ ಜಿಲ್ಲೆಯಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲಿ ಪುತ್ತಿಲ ಪರಿವಾರವು ಸ್ಪರ್ಧೆ ನಡೆಸಲಿದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯವಾಗಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಅರುಣ್ ಕುಮಾರ್ ಪುತ್ತಿಲ ಸ್ಥಾಪಿತ ಪುತ್ತಿಲ ಪರಿವಾದ ಮುಂದಿನ ನಡೆಯನ್ನು ಸಂಘಟನೆಯ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬಿಚ್ಚಿಟ್ಟಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ತಾನು 2ನೇ ಸ್ಥಾನವನ್ನು ಪಡೆಯುವುದರ ಜೊತೆಗೆ ಈ ಹಿಂದೆ 20 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು 3ನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಲೋಕಸಭಾ ಚುನಾವಣೆ ಯಲ್ಲಿಯೂ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ನಿಚ್ಚಳವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನ ಕುಮಾರ್ ಅವರು ಈಗಾಗಲೇ ಬಿಜೆಪಿ ಪಕ್ಷದ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ, ಸತೀಶ್ ಕುಂಪಲ, ಸಂಘ ಪರಿವಾರದ ಸಂತೋಷ್ ಜಿ, ಮತ್ತಿತರ ರಾಜ್ಯ ಮಟ್ಟದ ನಾಯಕರ ಜೊತೆ ಸಂದಾನ ನಡೆಸಲಾಗಿತ್ತು. ಸಂದಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ ಆದರೆ ಈ ತನಕ ಸಕಾರಾತ್ಮಕ ಪ್ರತಿಕ್ರಿಯೆ ಅವರಿಂದ ಬಾರದ ಕಾರಣ ಕಾರ್ಯಕರ್ತರ ಮತ್ತು ಮತದಾರರ ಹಿತದೃಷ್ಠಿಯಿಂದ ಅವರ ಆಶಯದಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಪುತ್ತಿಲ ಪರಿವಾರವು ಈ ತನಕ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯಾಚರಿಸುತ್ತಿತ್ತು. ಮುಂದಿನ ದಿನಗಳಲ್ಲಿ ಪುತ್ತಿಲ ಪರಿವಾರ ಸಂಘಟನೆಯು ಜಿಲ್ಲೆ ಮತ್ತು ರಾಜ್ಯ ಮಟ್ಟಕ್ಕೆ ವಿಸ್ತಾರಗೊಳ್ಳಲಿದೆ. ನಮ್ಮ ಹಿತೈಷಿಗಳು ಹಾಗೂ ಮತದಾರರ ರಕ್ಷಣೆಯ ಹೊಣೆ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ಸೇವಾ ಕಾರ್ಯಕ್ಕೆ ಹೆಚ್ಚಿನ ವೇಗ ನೀಡಲಾಗುವುದು. ಮಾದ್ಯಮಗಳೂ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆಯನ್ನು ಬಯಸುತ್ತಿದೆ. ಪುತ್ತಿಲ ಪರಿವಾರದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಿದಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದಿಂದ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ವಕ್ತಾರ ಶ್ರೀಕೃಷ್ಣ ಉಪಾದ್ಯಾಯ, ಉಪಾದ್ಯಕ್ಷ ಮಹೇಂದ್ರ ವರ್ಮ, ನಗರ ಅಧ್ಯಕ್ಷ ಅನಿಲ್ ತೆಂಕಿಲ ಉಪಸ್ಥಿತರಿದ್ದರು.







