ಕೊಣಾಜೆ: ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿ ಮೃತ್ಯು; ನೊಂದ ಪತಿ ಆತ್ಮಹತ್ಯೆ

ಕೊಣಾಜೆ: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಚಾವಡಿ ಬಳಿ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿಯ ನಿಧನವಾರ್ತೆ ಕೇಳಿ ಪತಿಯು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಗ್ರಾಮಚಾವಡಿಯ ಸೇಸಪ್ಪ ಪೂಜಾರಿ ಅವರ ಪತ್ನಿ ಮೀನಾಕ್ಷಿ ಅವರಿಗೆ ಕಳೆದ ಕೆಲವು ತಿಂಗಳ ಹಿಂದೆ ಹೃದಯಾಘಾತವಾಗಿ ಬಳಿಕ ಗುಣಮುಖವಾಗಿದ್ದರು. ಬಳಿಕ ಎರಡು ದಿನದ ಹಿಂದೆ ಎದೆ ನೋವು ಕಾಣಿಸಿಕೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ರಾತ್ರಿ ಅವರು ನಿಧನರಾಗಿದ್ದು, ಇದನ್ನು ತಿಳಿದ ಅವರ ಪತಿ ನೊಂದು ಕೊಂಡಿದ್ದು, ಬಳಿಕ ಆಸ್ಪತ್ರೆಯಿಂದ ಬಂದು ಮನೆಯಲ್ಲಿ ವಿಷ ಕುಡಿದಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಸಮೀಪದ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಶಾಲಾ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸೇಸಪ್ಪ ಪೂಜಾರಿ ಅವರಿಗೆ ಮಕ್ಕಳಿರಲಿಲ್ಲ ಎಂಬ ಕೊರಗು ಅನೇಕ ವರ್ಷ ಗಳಿಂದ ಇತ್ತು ಎನ್ನಲಾಗಿದೆ. ಗುರುವಾರ ಪತಿ ಪತ್ನಿಯ ಶವವನ್ನು ಒಟ್ಟಿಗೆ ಮನೆಗೆ ತಂದಿದ್ದು, ಬಳಿಕ ಎಲ್ಯಾರ್ ಸ್ಮಶಾನದಲ್ಲಿ ದಹನ ಮಾಡಲಾಗಿದೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





