ನೆಟ್ಲಮುಡ್ನೂರು ವಲಯ: ಕಾಂಗ್ರೆಸ್ ಕಾರ್ಯಕರ್ತರ ಸಭೆ
![ನೆಟ್ಲಮುಡ್ನೂರು ವಲಯ: ಕಾಂಗ್ರೆಸ್ ಕಾರ್ಯಕರ್ತರ ಸಭೆ ನೆಟ್ಲಮುಡ್ನೂರು ವಲಯ: ಕಾಂಗ್ರೆಸ್ ಕಾರ್ಯಕರ್ತರ ಸಭೆ](https://www.varthabharati.in/h-upload/2024/04/12/1260194-whatsapp-image-2024-04-12-at-82638-pm.webp)
ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಟ್ಲಮುಡ್ನೂರು ಗ್ರಾಮದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗಣೇಶ ನಗರದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಲೋಕಸಭಾ ಚುನಾವಣಾ ಪ್ರಚಾರದ ಬಂಟ್ವಾಳ ಕ್ಷೇತ್ರದ ಉಸ್ತುವಾರಿ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದ.ಕ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರನ್ನು ಗೆಲ್ಲಿಸಲು ಆಹೋರಾತ್ರಿ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜನಪರ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ರಾಜ್ಯದ ಜನತೆ ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ, ಕಳೆದ ಹತ್ತು ವರ್ಷಗಳ ಬಿಜೆಪಿಯ ದುರಾಡಳಿತ, ಬೆಲೆಯೇರಿಕೆ, ನಿರುದ್ಯೋಗ, ದ್ವೇಷ ರಾಜಕೀಯ, ಸಂವಿಧಾನ ವಿರೋಧಿ ಚಟುವಟಿಕೆಗಳಿಂದ ಜನರ ಆಕ್ರೋಶಿತರಾಗಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯನ್ನು ಉದ್ಘಾಟಿಸಿದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ ಕಾರ್ಯ ಕರ್ತರು ಮನೆ ಮನೆಗೆ ತೆರಳಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯತೆಯ ಬಗ್ಗೆ ಮಾಹಿತಿ, ಹಾಗೂ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರ ಪರಿಚಯ ಮತ್ತು ಅವರ ಜನಸೇವಾ ಕಾರ್ಯ ಚಟುವಟಿಕೆಗಳ ಬಗ್ಗೆ ಜನತೆಗೆ ತಿಳಿಸಬೇಕು ಎಂದರು.
ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀಧರ್ ರೈ ಅಧ್ಯಕ್ಷತೆ ವಹಿಸಿದ್ದರು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ.ಪೂಜಾರಿ, ಉಪಾಧ್ಯಕ್ಷ ಸತೀಶ್ ಪೂಜಾರಿ ಮಾತನಾಡಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ನಿರಂಜನ್ ರೈ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮ, ಮಾಜಿ ಅಧ್ಯಕ್ಷೆ ವಿಜಯಾ, ಮಾಜಿ ಉಪಾಧ್ಯಕ್ಷೆ ರೇವತಿ, ಪಕ್ಷದ ಹಿರಿಯ ಮುಖಂಡರು, ಬೂತ್ ಅದ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.