ಅಂತರ್ರಾಜ್ಯ ಚೆಕ್ ಪೋಸ್ಟ್ಗಳಲ್ಲಿ ಕಟ್ಟೆಚ್ಚರ ಮುಂದುವರಿಕೆ: ಡಿಸಿ ಮುಲ್ಲೈ ಮುಗಿಲನ್
ಸಹಾಯಕ ಚುನಾವಣಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನ ಪೂರ್ಣಗೊಂಡಿದ್ದು, ಚುನಾವಣಾ ಪ್ರಕ್ರಿಯೆ ಗಳಿಗಾಗಿ ನಿಯೋಜಿತಗೊಂಡ ವಿವಿಧ ತಂಡಗಳ ಮುಂದಿನ ಕಾರ್ಯಭಾರ ಕುರಿತು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧ್ಯಕ್ಷತೆ ವಹಿಸಿದ್ದರು.
ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ರಚಿಸಲಾಗಿರುವ ಅಂತರ್ ರಾಜ್ಯ ಚೆಕ್ ಪೋಸ್ಟ್ ಗಳಲ್ಲಿ, ಸುಳ್ಯದ ಈಶ್ವರ ಮಂಗಳ, ತಲಪಾಡಿ ಹಾಗೂ ಬಂಟ್ವಾಳದ ಆನೇಕಲ್ನ ಚೆಕ್ ಪೋಸ್ಟ್ ಗಳು ಮುಂದೆಯೂ ಕಟ್ಟೆಚ್ಚರದಲ್ಲಿ ಕಾರ್ಯನಿರ್ವಹಿಸಬೇಕು, ಉಳಿದಂತೆ ವಿಧಾನಸಭಾ ಕ್ಷೇತ್ರವಾರು ರಚನೆಯಾಗಿರುವ ಫ್ಲೈಯಿಂಗ್ ಸ್ಕ್ವಾಡ್ ತಂಡವೊಂದು ಪೂರ್ಣ ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಈ ಹಿಂದೆ ಖಾಸಗಿ ಕಾರ್ಯಕ್ರಮಗಳಿಗಾಗಿ ಏಕಗವಾಕ್ಷಿ ಕೇಂದ್ರದಲ್ಲಿ ಅನುಮತಿ ಪಡೆಯುತ್ತಿದ್ದಂತೆ ಇನ್ನೂ ಮುಂದೆ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯೂ ಆಗಿರುವ ಡಾ.ಆನಂದ್ ಕೆ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಜಿ, ಇತರೆ ಅಧಿಕಾರಿಗಳು ಇದ್ದರು.
ಎಲ್ಲಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ವಿಡಿಯೋ ಸಂವಾದದ ಮೂಲಕ ಭಾಗವಹಿಸಿದ್ದರು.