ಪುತ್ತೂರು| ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪ
ಸಂಬಂಧಿಕರಿಂದ ಆಕ್ರೋಶ
![ಪುತ್ತೂರು| ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪ ಪುತ್ತೂರು| ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪ](https://www.varthabharati.in/h-upload/2024/05/16/1266928-16ptr-hospital-2.webp)
ಪುತ್ತೂರು: ಖಾಸಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದ್ದು, ಮೃತರ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಕಕ್ಕೆಪದವು ಪಿಲಿಬೈಲಿನ ನಿವಾಸಿ ಕೃಷ್ಣಪ್ಪ ಗೌಡ (47) ಮೃತರು. ಜ್ವರ ಬಂದ ಕಾರಣ ಕೃಷ್ಣಪ್ಪರನ್ನು ಪುತ್ತೂರಿನ ದರ್ಬೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಅವರ ನಾಲಿಗೆ ಅಡಿ ಭಾಗದಲ್ಲಿ ಗೆಡ್ಡೆ ಇದೆ. ಅದನ್ನು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಬೇಕೆಂದು ಮನೆಯವರಿಗೆ ಸೂಚಿಸಿ ಪತ್ನಿ ಸರೋಜಿನಿ ಹಾಗೂ ಅವರ ಸಂಬಂಧಿಕ ಮಹಿಳೆಯೊಬ್ಬರ ಸಹಿ ಹಾಕಿಸಿಕೊಂಡಿದ್ದರು. ಜ್ವರಕ್ಕೆಂದು ದಾಖಲಾದ ವ್ಯಕ್ತಿಗೆ ಕ್ಯಾನ್ಸರ್ ಇದೆ ಎಂದು ಗೆಡ್ಡೆಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಚಿಕಿತ್ಸೆ ಬಳಿಕ ಕೃಷ್ಣಪ್ಪ ಗೌಡ ಮೃತಪಟ್ಟಿದ್ದರು. ಇದರಿಂದ ಅವರ ಸಂಬಂಧಿಕರು ಹಾಗೂ ಸಾರ್ವಜನಿಕರು ರಾತ್ರೋರಾತ್ರಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿಕರ ಆರೋಪದ ಹಿನ್ನಲೆಯಲ್ಲಿ ವ್ಯಕ್ತಿಯ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಮೃತದೇಹವನ್ನು ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನಗರಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.