ಮಕ್ಕಳ ಸಾಮರ್ಥ್ಯವನ್ನು ಪರೀಕ್ಷೆಗಳ ಅಂಕಗಳಿಂದ ಅಳೆಯುವುದು ಸರಿಯಲ್ಲ : ತಾರಾನಾಥ ಪೂಜಾರಿ

ಮಂಗಳೂರು, ಮೇ 25: ಇಂದಿನ ಶಿಕ್ಷಣ ವ್ಯವಸ್ಥೆಯು ಕ್ರಮಬದ್ಧ ಸ್ಥಿತಿಯಲ್ಲಿ ಇಲ್ಲ. ಮಕ್ಕಳ ಸೃಜನಶೀಲತೆಗೆ ತಕ್ಕುದಾದ ಶಿಕ್ಷಣವು ಶಿಕ್ಷಣ ವ್ಯವಸ್ಥೆಯಿಂದ ದೊರಕುತ್ತಿಲ್ಲ. ಪ್ರತಿಭಾನ್ವಿತ ಮಕ್ಕಳು ಇದರಿಂದಾಗಿ ತಮ್ಮ ಪ್ರತಿಭೆಯನ್ನು ತೋರ್ಪಡಿಸ ಲಾಗದೆ ಹಿನ್ನೆಲೆಗೆ ಸರಿಯುತ್ತಿದ್ದಾರೆ. ಮಕ್ಕಳ ಸಾಮರ್ಥ್ಯವನ್ನು ಕೇವಲ ಪರೀಕ್ಷೆಯಿಂದ ದೊರೆತ ಅಂಕಗಳಲ್ಲಿ ಅಳೆಯು ವುದು ಸರಿಯಲ್ಲ ಎಂದು ಹಿರಿಯ ವಕೀಲರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನಾಮ ನಿರ್ದೇಶಿತ ಸದಸ್ಯ ಇರುವೈಲು ತಾರಾನಾಥ ಪೂಜಾರಿ ಹೇಳಿದ್ದಾರೆ.
ಚಿಣ್ಣರ ಚಾವಡಿ ಇರುವೈಲು ಇದರ ಆಶ್ರಯದಲ್ಲಿ ಇರುವೈಲು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಇಲ್ಲಿ ನಡೆಯುತ್ತಿ ರುವ ನಕ್ಷತ್ರ ಲೋಕ ಚಿಣ್ಣರ ಸಂತಸ ಕಲಿಕಾ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಕೂಡ ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಪ್ರತಿ ಮಗುವು ನನ್ನ ಮನೆ, ನನ್ನ ಊರು, ನನ್ನ ಬಂಧು ಗಳು ಎಂಬ ಪರಿಧಿಯನ್ನು ಮೀರಿ ವಿಶ್ವ ಭಾವನೆಯನ್ನು ಬೆಳೆಸಿಕೊಂಡು ವಿಶ್ವ ಭ್ರಾತೃತ್ವವನ್ನು ತನ್ನದಾಗಿಸಿಕೊಂಡು ವಿಶ್ವಮಾನವರಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.
ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಇವರು ಮಾತನಾಡುತ್ತಾ ಅನುಭವ ಮಕ್ಕಳಿಗೆ ಪಾಠವಾಗಬೇಕು. ಅನುಭವಗಳಿಂದಲೇ ಮಕ್ಕಳು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಶಿಬಿರಗಳು ಮಕ್ಕಳೊಳಗಿರುವ ಪ್ರತಿಭೆಗಳನ್ನು ಹೊರಗೆಡವುದರಲ್ಲಿ ಸಹಕಾರಿ ಎಂದರು.
ಹಿರಿಯ ಉದ್ಯಮಿ ಪಾಣೆಲಾ ಸತೀಶ್ ಚಂದ್ರ , ಬಿಲ್ಲವ ಸಂಘ ಇರುವೈಲು ಪುಚ್ಚೆಮೊಗರು , ಹಿರಿಯ ರೈತ ಮುಖಂಡ ಪದ್ಮನಾಭ ಪೂಜಾರಿ ಕನಡ್ರಕೋಡಿ, ಶಿಬಿರದ ನಿರ್ದೇಶಕ ಸುಧೀಶ್ ಕೂಡ್ಲು ಉಪಸ್ಥಿತರಿದ್ದರು. ಚಿಣ್ಣರ ಚಾವಡಿಯ ಮನೋಜ್ ವಾಮಂಜೂರು ಪ್ರಾಸ್ತಾವಿಕ ಮಾತನಾಡಿದರು. ಸೀನ ನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಒಟ್ಟು 50 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.







