ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಜೊತೆ ಚರ್ಚೆ: ಸ್ಪೀಕರ್ ಯು.ಟಿ. ಖಾದರ್
ಮೀಫ್ ವಾರ್ಷಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಂಗಳೂರು : ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಯನ್ನು ಉಳಿಸಿ ಬೆಳೆಸುವುದು ಆಯಾ ಆಡಳಿತ ಮಂಡಳಿಗೆ ಸವಾಲಾಗಿ ಪರಿಣಮಿಸಿವೆ. ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಕೂಡ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿವೆ. ಈ ಬಗ್ಗೆ ತಾನು ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಸಚಿವರು, ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸೂಕ್ತ ಪರಿಹಾರಕ್ಕೆ ಪ್ರಯತ್ನಿಸುವೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್)ದ ವತಿಯಿಂದ ನಗರದ ಜಪ್ಪಿನಮೊಗರಿನ ಪ್ರಿಸ್ಟೇಜ್ ಇಂಟರ್ನ್ಯಾಶನಲ್ ಸ್ಕೂಲ್ ಅಡಿಟೋರಿಯಂನಲ್ಲಿ ರವಿವಾರ ನಡೆದ ಮೀಫ್ ವಾರ್ಷಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೀಫ್ ಇಂದು ತನ್ನ ಸದಸ್ಯತ್ವ ಪಡೆದ ಶಾಲೆಗಳಲ್ಲದೆ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ವರ್ಷದಿಂದ ಟ್ಯುಟೋರಿಯಲ್ಗಳಲ್ಲಿ ಕಲಿತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕೂಡ ಈ ಪುರಸ್ಕಾರಗಳಿಗೆ ಪರಿಗಣಿಸಬೇಕು ಎಂದು ಸೂಚಿಸಿದ ಯು.ಟಿ. ಖಾದರ್, ವಿದ್ಯಾರ್ಥಿಗಳು ಅತ್ಯಧಿಕ ಅಂಕ ಗಳಿಸಲು ಹೆತ್ತವರು, ಶಿಕ್ಷಕರು, ಶಾಲಾ-ಕಾಲೇಜಿನ ಆಡಳಿತ ಮಂಡಳಿಯ ಶ್ರಮವೂ ಇದೆ. ಹಾಗಾಗಿ ಅವರನ್ನು ಎಂದೂ ವಿದ್ಯಾರ್ಥಿಗಳು ಮರೆಯಬಾರದು. ಇತರರಿಗೆ ಸ್ಫೂರ್ತಿಯಾಗುವಂತಹ ಸಾಧನೆಯನ್ನು ವಿದ್ಯಾರ್ಥಿಗಳು ಮುಂದೆಯೂ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ʼನಾನಿಂದು ಐಎಎಸ್ ಅಧಿಕಾರಿಯಾಗಿದ್ದರೆ ಅದಕ್ಕೆ ನಾನು ಪಡೆದ ಶಿಕ್ಷಣವೇ ಕಾರಣ. ಸರಕಾರಿ ಶಾಲೆಯ ಶಿಕ್ಷಕನಾಗಿದ್ದ ತಂದೆ ನನ್ನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ನಾನು ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡೆ. ವಿದ್ಯಾರ್ಥಿಯಾಗಿರುವಾಗಲೇ ನಮಗೆ ಬದುಕಿನ ಬಗ್ಗೆ ಗುರಿ ಇರಬೇಕು. ಯಾವ ಕಾರಣಕ್ಕೂ ನಮ್ಮಲ್ಲಿ ಕೀಳರಿಮೆ ಇರಬಾರದು. ವ್ಯವಸ್ಥೆಯು ನಮಗೆ ಅವಕಾಶ ನಿರಾಕರಿಸಬಹುದು ಎಂಬ ಆತಂಕವೂ ನಮಗಿರಬಾರದುʼ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
30 ವರ್ಷದ ಹಿಂದೆ ಕರಾವಳಿಯ ಮುಸ್ಲಿಮರಲ್ಲಿ ಶೈಕ್ಷಣಿಕ ಜಾಗೃತಿ ಇರಲಿಲ್ಲ. ಈವಾಗ ಉನ್ನತ ಶಿಕ್ಷಣದತ್ತ ಮುಸ್ಲಿಂ ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಅನೇಕ ಸಮಸ್ಯೆಗಳನ್ನು ಎದುರಿಸುವ ವಿಚಾರ ತಿಳಿದಿದೆ. ಆ ಬಗ್ಗೆ ಮುಖ್ಯಮಂತ್ರಿಯ ಜೊತೆ ಮಾತುಕತೆ ನಡೆಸಲಾಗುವುದು ಎಂದು ಎಲ್.ಕೆ. ಅತೀಕ್ ಹೇಳಿದರು.
ದಿಕ್ಸೂಚಿ ಭಾಷಣಗೈದ ಮೀಫ್ ಗೌರವಾಧ್ಯಕ್ಷ ಉಮರ್ ಟೀಕೆ ಅವರು ಮಾತನಾಡಿ, ಮೀಫ್ ಸಂಘಟನೆಯು ಮಾಜಿ ಸಚಿವ ಬಿ.ಎ.ಮೊಯ್ದಿನ್ ಅವರ ಕನಸಿನ ಕೂಸಾಗಿದೆ. ಶಿಕ್ಷಣದ ಮಹತ್ವ ಅರಿತಿದ್ದ ಅವರು ಮುಸ್ಲಿಂ ಜಮಾಅತ್, ಮುಸ್ಲಿಂ ಸಂಸ್ಥೆಗಳ ಪದಾಧಿಕಾರಿಗಳನ್ನು ಭೇಟಿಯಾಗಿ ಮದ್ರಸ ಕಟ್ಟಡಗಳಲ್ಲಿ ಶಾಲಾ ತರಗತಿಗಳನ್ನು ನಡೆಸಲು ಮಾರ್ಗದರ್ಶನ ನೀಡಿದರು. ಅದರ ಫಲವಾಗಿ ಇಂದು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 183 ಮುಸ್ಲಿಂ ಶಿಕ್ಷಣ ಸಂಸ್ಥೆಗಳಿವೆ. ಮದ್ರಸಗಳಲ್ಲಿ ಭಯೋತ್ಪಾದನೆ ಮಾಡಲಾಗುತ್ತಿದೆ ಎಂಬ ಇತರರ ಆರೋಪವನ್ನು ಕೂಡ ಈ ಶಿಕ್ಷಣ ಸಂಸ್ಥೆಗಳು ಸುಳ್ಳಾಗಿಸಿವೆ. ಮುಸ್ಲಿಮೇತರ ಶಿಕ್ಷಕ ವರ್ಗ ಮತ್ತು ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಮದ್ರಸಗಳನ್ನು ಸಾಮರಸ್ಯ ಹಂಚುವ ಕೇಂದ್ರಗಳನ್ನಾಗಿ ಮಾಡಿವೆ. ಮೀಫ್ ಕೂಡ ಜಾತಿ, ಮತ ಮೀರಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರೋತ್ಸಾಹಿಸಿದೆ ಎಂದರು.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಸಮಸ್ಯೆ ಸೃಷ್ಟಿಯಾಗದಂತೆ ಮೀಫ್ ನೋಡಿಕೊಳ್ಳುತ್ತಿವೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿವೆ. ಮುಸ್ಲಿಂ ಶಿಕ್ಷಣ ಸಂಸ್ಥೆಯ ಆಸುಪಾಸಿನಲ್ಲಿರುವ ಸರಕಾರಿ ಶಾಲೆಗಳ 2500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ ನೀಡಿದೆ. ಇವೆಲ್ಲದರ ಮಧ್ಯೆ ಈ ಶಿಕ್ಷಣ ಸಂಸ್ಥೆಗಳ ಕಟ್ಟಡಗಳು ಬಹುತೇಕ ಶಿಥಿಲಗೊಂಡಿದ್ದು, ಅವುಗಳನ್ನು ಸುಸಜ್ಜಿತಗೊಳಿಸಲು ಅನುದಾನ ನೀಡಬೇಕು ಎಂದು ಉಮರ್ ಟೀಕೆ ಸರಕಾರಕ್ಕೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೀಫ್ ಗೌರವ ಸಲಹೆಗಾರ ಸಯ್ಯದ್ ಮುಹಮ್ಮದ್ ಬ್ಯಾರಿ ಮೀಫ್ನ 183 ಶಿಕ್ಷಣ ಸಂಸ್ಥೆಗಳ ಪೈಕಿ 90 ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿವೆ. ಸುಸಜ್ಜಿತ ಕಟ್ಟಡ ಸಹಿತ ಮೂಲಭೂತ ಸೌಕರ್ಯದ ಕೊರತೆ ಎದುರಿಸುತ್ತಿವೆ. ಹಾಗಾಗಿ ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಹೆಚ್ಚುವರಿ ಅನುದಾನ ಮೀಸಲಿಟ್ಟು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ದಾನಿಗಳಿದ್ದಾರೆ. ಅವರಿಗೆ ತಮ್ಮ ದಾನವನ್ನು ಯಾರಿಗೆ, ಹೇಗೆ ವಿನಿಯೋಗಿಸಬೇಕು ಎಂದು ತಿಳಿದಿಲ್ಲ. ಉದಾರವಾಗಿ ಕೊಟ್ಟ ನೆರವು ದುರುಪಯೋಗವಾಗಬಹುದೋ ಎಂಬ ಆತಂಕವೂ ಅವರಿಗಿದೆ. ಈ ನಿಟ್ಟಿನಲ್ಲಿ ಅನಿವಾಸಿ ಕನ್ನಡಿಗರ ಪಟ್ಟಿ ಮಾಡಿ ಅವರಿಂದ ಆರ್ಥಿಕ ನೆರವು ಪಡೆಯಲು ಱಮೀಫ್ ನಾಯಕತ್ವ ವಹಿಸಬೇಕು ಎಂದು ಸಯ್ಯದ್ ಮೊಹಮ್ಮದ್ ಬ್ಯಾರಿ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ, ಮೀಫ್ ಶಿಕ್ಷಣ ಸಂಸ್ಥೆಯಲ್ಲ, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟವಾಗಿದೆ. ಗೌರವಾಧ್ಯಕ್ಷ ಉಮರ್ ಟೀಕೆ ಮತ್ತು ಗೌರವ ಸಲಹೆಗಾರ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರ ಪ್ರೋತ್ಸಾಹ, ನೆರವಿನಿಂದ ಮುನ್ನಡೆಯುತ್ತಿದೆ. ಮೀಫ್ನ ಸ್ಥಾಪಕ ಮರ್ಹೂಂ ಬಿ.ಎ. ಮೊಯ್ದಿನ್, ಅಧ್ಯಕ್ಷರಾಗಿದ್ದ ಮರ್ಹೂಂ ಪಿ.ಎ.ಖಾದರ್ ಕುಕ್ಕಾಡಿ ಮತ್ತು ಎಡಪದವು ಮುಹಮ್ಮದ್ ಬ್ಯಾರಿ ಅವರ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿವೆ. ನಮ್ಮ ತಂಡದ ಸರ್ವರ ಪರಿಶ್ರಮ ಕಂಡು ಸದಸ್ಯ ಸಂಸ್ಥೆಗಳು ಎಲ್ಲಾ ರೀತಿಯ ಸಹಕಾರ ನೀಡುತ್ತಿವೆ. ಮೀಫ್ನ ಬೆಳವಣಿಗೆಯ ಹಿಂದೆ ಆಡಳಿತ ಮಂಡಳಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಹೆತ್ತವರ ಪರಿಶ್ರಮ ಇದೆ ಎಂದರು.
ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿಸಾರ್ ಅಹ್ಮದ್, ಯೆನೆಪೊಯ ವಿಶ್ವವಿದ್ಯಾನಿಲಯದ ಸಹ ಕುಲಪತಿ ಫರ್ಹಾದ್ ಯೆನೆಪೊಯ, ಯೆನೆಪೊಯ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಮುಹಮ್ಮದ್ ತಾಹಿರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ಮಂಗಳೂರು ಎಜುಕೇಶನ್ ಎನ್ಹಾನ್ಸ್ಮೆಂಟ್ ಟ್ರಸ್ಟ್ನ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಬರಕಾ ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಬೆಂಗಳೂರಿನ ಪ್ರೀಮಿಯರ್ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಮಂಗಳೂರಿನ ಎಚ್ಆರ್ ಎಜುಕೇಶನಲ್ ಫೌಂಡೇಶನ್ ಅಧ್ಯಕ್ಷ ಹೈದರ್ ಅಲಿ ಕೆ. ಅತಿಥಿಗಳಾಗಿ ಭಾಗಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶಬಿ ಖಾಝಿ, ಬಿ.ಎಂ. ಮುಮ್ತಾಝ್ ಅಲಿ, ಮುಸ್ತಫಾ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು. ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು ಮತ್ತು ಮುಹಮ್ಮದ್ ಶಾರೀಕ್ ಪ್ರತಿಭಾ ಪುರಸ್ಕೃತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಮುಹಮ್ಮದ್ ಸುಹಾನ್ ಕಿರಾಅತ್ ಪಠಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಮೀಫ್ ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ವಂದಿಸಿದರು.
*2023-24ನೇ ಶ್ಯೆಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮಾಜಿ ಸಚಿವ, ಮೀಫ್ ಸ್ಥಾಪಕ ಮರ್ಹೂಂ ಬಿ.ಎ.ಮೊಯ್ದಿನ್ ನೆನಪಿನಲ್ಲಿ "ಅತ್ಯುತ್ತಮ ಶಾಲಾ-ಕಾಲೇಜು ಪುರಸ್ಕಾರ" ನೀಡಲಾಯಿತು.
*ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.95ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ 85 ವಿದ್ಯಾರ್ಥಿಗಳನ್ನು ಮರ್ಹೂಂ ಎಡಪದವು ಮುಹಮ್ಮದ್ ಬ್ಯಾರಿ ಮತ್ತು ಮರ್ಹೂಂ ಪಿ.ಎ.ಖಾದರ್ ಕುಕ್ಕಾಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
*24 ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಮತ್ತು ಇಂಜಿನಿಯರಿಂಗ್ ಸೀಟುಗಳನ್ನು ಮತ್ತು ಪ್ರತಿಭಾನ್ವಿತ 6 ವಿದ್ಯಾರ್ಥಿಗಳಿಗೆ ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಸೀಟುಗಳನ್ನು ಹಾಗೂ ಆರ್ಥಿಕವಾಗಿ ಹಿಂದುಳಿದ 50 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.







