ಸಂವಿಧಾನದ ಆಶಯಗಳು ಉಳಿಸಿಕೊಳ್ಳಲು ಕಠಿಬದ್ದ: ಮಾವಳ್ಳಿ ಶಂಕರ್
ಉಚಿತ ನೋಟ್ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕುಂದಾಪುರ, ಮೇ 26: ಕರಾವಳಿ ಜಿಲ್ಲೆಗಳು ಶಿಕ್ಷಣದಲ್ಲಿ ಬಹಳಷ್ಟು ಸಾಧನೆ ಮಾಡಿದ್ದರೂ ಕೂಡ ವೈಚಾರಿಕತೆ, ವೈಜ್ಞಾನಿಕ ವಾಗಿ ಹಿಂದುಳಿದಿದೆ. ಕೋಮು ವಾದಿಗಳು ವಿಜೃಂಭಿಸುತ್ತಿದ್ದು, ಸಂವಿಧಾನ ವಿರೋಧಿ ಶಕ್ತಿಗಳು ಬೆಳೆಯುತ್ತಿವೆ. ಸಂವಿಧಾನ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಸಂವಿಧಾನದ ಆಶಯಗಳು ಉಳಿಸಿಕೊಳ್ಳಲು ನಾವು ಕಠಿಬದ್ದರಾಗಾಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೋಟ ಹೋಬಳಿ ಶಾಖೆ ವತಿಯಿಂದ ಕೋಟ ಸಿ.ಎ ಬ್ಯಾಂಕ್ ಪ್ರಧಾನ ಕಚೇರಿಯ ಬಿ.ಸಿ ಹೊಳ್ಳ ಸಹಕಾರ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ‘ಅಕ್ಷರದಕ್ಕರೆ-2024’(ಎದೆಗೆ ಬೀಳಲಿ ...ಅಕ್ಷರ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ಖಾಸಗಿಕರಣವಾಗುತ್ತಿದ್ದು ಉಳ್ಳವರ ಮತ್ತು ಇಲ್ಲದವರ ಶಿಕ್ಷಣ ಎಂಬಂತೆ ವರ್ಗೀಕರಿಸುತ್ತಿರುವುದು ದುರಂತ. ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾದರೆ ಮಾತ್ರ ಅಂತರ ಕಡಿಮೆಯಾಗಿ ಶ್ರೀಮಂತ-ಬಡವ ಎಂಬ ಅಸಮಾನತೆ ಹೋಗಲಾಡಿಸಬಹುದು ಎಂದು ಅವರು ತಿಳಿಸಿದರು.
ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ತೋರಿಸಬಾರದು. ಚಾರಿತ್ರ್ಯಿಕವಾಗಿಯೂ ಕೂಡ ಸರಕಾರಿ ಶಾಲೆಗಳಲ್ಲಿ ಓದಿದವರ ಸಾಧನೆ ಅಪಾರ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೂಲಸೌಕರ್ಯ ಒದಗಿಸಿ ಉತ್ತೇಜನ ನೀಡು ವುದು ಆಳುವ ಸರಕಾರಗಳ ಜವಬ್ದಾರಿಯಾಗಿದೆ. ಒಂದು ಕನ್ನಡ ಶಾಲೆ ಮುಚ್ಚಿದರೆ 10 ಹಳ್ಳಿಗಳ ಮಕ್ಕಳು ಜೀತಗಾರರಾ ಗುತ್ತಾರೆಂಬುದನ್ನು ಮನಗಾಣ ಬೇಕು. ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಬೋಧನೆಗೆ ಒತ್ತಾಯಿಸಿ ಶಾಲೆ ಉಳಿವಿನಲ್ಲಿ ದಲಿತ ಚಳುವಳಿ ಮಹತ್ತರ ಪಾತ್ರವಹಿಸಿತ್ತು ಎಂದರು.
ಉಚಿತ ನೋಟ್ ಪುಸ್ತಕ ವಿತರಿಸಿದ ಮಣೂರು-ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಮಕ್ಕಳು ಹೆಚ್ಚು ಶಿಕ್ಷಣದಲ್ಲಿ ತೊಡಗಿಸಿಕೊಂಡಾಗ ಜನಾಂಗ ಮುಂದೆ ಬರಲು ಸಾಧ್ಯವಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಶಿಕ್ಷಣವೊಂದೇ ಧ್ಯೇಯ ವಾಕ್ಯ ಎಂಬುದನ್ನು ಮನಗಾಣ ಬೇಕು. ಹಿಂದುಳಿದವರು ಸದೃಢರಾಗಲು ವಿದ್ಯೆ ಎಂಬ ಪ್ರಬಲ ಅಸ್ತ್ರದಿಂದ ಸಾಧ್ಯವಿದೆ ಎಂದರು.
ಇದೇ ಸಂದರ್ಭ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ 10 ಮಂದಿ, ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ನಾಲ್ಕು ಮಂದಿಯನ್ನು ಗೌರವಿಸಲಾಯಿತು. ಯೋಗ ಪಟು ನಿರೀಕ್ಷಾ ದಿನಕರ್ ಶೆಟ್ಟಿ , ಸಮುದಾಯದ ಸಾಧಕ ರಾದ ನೀಲಾವರ ಮೇಳದ ಪ್ರಧಾನ ಭಾಗವತ ನವೀನ್ ಕೋಟ, ಬಾಲ ಪ್ರತಿಭೆ ಲಿಖಿತಾ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ದಸಂಸ ಕೋಟ ಹೋಬಳಿ ಶಾಖೆ ಸಂಚಾಲಕ ನಾಗರಾಜ ಪಡುಕೆರೆ ವಹಿಸಿದ್ದರು. ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ.ಕೆ. ಕೃಷ್ಣ ಕಾಂಚನ್, ದಸಂಸ ಮಹಿಳಾ ಘಟಕದ ರಾಜ್ಯ ಸಂಘಟನಾ ಸಂಚಾಲಕಿ ಉಷಾರಾಣಿ, ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ ಕುಮಾರ್, ರಾಜ್ಯ ಸಮಿತಿ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ ರಾಜ್ ಬಿರ್ತಿ, ವಾಸುದೇವ ಮುದೂರು, ಎನ್.ಎ ನೇಜಾರು, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ, ಬೈಂದೂರು ತಾಲೂಕು ಸಂಚಾಲಕ ನಾಗರಾಜ ಉಪ್ಪುಂದ, ಬ್ರಹ್ಮಾವರ ತಾಲೂಕು ಸಂಚಾಲಕ ಶ್ರೀನಿವಾಸ ವಡ್ಡರ್ಸೆ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಂಘಟನಾ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ರವಿ ಬನ್ನಾಡಿ, ಮಂಜುನಾಥ ಬಾಳ್ಕುದ್ರು ಹೋರಾಟದ ಗೀತೆ ಹಾಡಿದರು. ಉಪನ್ಯಾಸಕರಾದ ಮಂಜುನಾಥ ಕೆ.ಎಸ್, ನಾಗರಾಜ ಗುಳ್ಳಾಡಿ, ಅಧ್ಯಾಪಕ ಸಂತೋಷ ಕುಮಾರ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು. ಕುಮಾರ್ ಕೋಟ ವಂದಿಸಿದರು.
‘ಶಿಕ್ಷಣದಿಂದ ವೈಚಾರಿಕತೆಯ ಜಾಗೃತಿ’
ದೇವಸ್ಥಾನದ ಘಂಟೆಗಿಂತ ಹೆಚ್ಚಾಗಿ ಶಾಲೆಗಳ ಘಂಟೆಗಳು ಮೊಳಗಿದರೆ ವೈಚಾರಿಕತೆಯ ಜಾಗೃತಿ ಮೂಡುತ್ತದೆ. ಮಕ್ಕಳಿಗೆ ಗುಡಿ-ಗೋಪುರಗಳನ್ನು ಸುತ್ತಿಸುವುದನ್ನು ಪೋಷಕರು ಬಿಡಬೇಕು. ಮಹಾನ್ ವ್ಯಕ್ತಿಗಳ ಚಿಂತನೆ ಅಳವಡಿಸಿ ಕೊಳ್ಳುವಲ್ಲಿ ಮಕ್ಕಳಿಗೆ ಸ್ಪೂರ್ತಿ ತುಂಬಬೇಕು ಎಂದು ಮಾವಳ್ಳಿ ಶಂಕರ್ ಹೇಳಿದರು.
ಈ ದೇಶದ ಬಹು ದೊಡ್ಡ ದಲಿತ ಸಮುದಾಯವನ್ನು ಶಿಕ್ಷಣ ವಂಚಿತರಾಗಿ ಮಾಡಲಾಗಿತ್ತು. ನಂತರ ವೈಚಾರಿಕ ಕ್ರಾಂತಿ ಮಾಡಿದವರಲ್ಲಿ ಬುದ್ಧ, ಚಕ್ರವರ್ತಿ ಅಶೋಕ, ಮಹಾತ್ಮ ಜ್ಯೋತಿ ಬಾಪುಲೆ, ಸಾವಿತ್ರಿ ಬಾಯಿ ಪುಲೆ, ಕುದ್ಮುಲ್ ರಂಗರಾವ್, ಪೆರಿಯಾರ್, ಅಂಬೇಡ್ಕರ್ ಪ್ರಮುಖರು. ಇವರುಗಳ ವ್ಯಕ್ತಿತ್ವ ನಮಗೆ ಮಾದರಿಯಾಗಬೇಕು. ಮಕ್ಕಳು ಉನ್ನತ ಹಾಗೂ ಉದತ್ತವಾದ ಕನಸು ಕಟ್ಟಿಕೊಂಡು ಬಾಬಾ ಸಾಹೇಬರ ಕುಡಿಗಳು ಶಕ್ತಿವಂತರೆಂದು ಸಾಭೀತು ಮಾಡಬೇಕು ಎಂದರು.







