ಶಾಸಕ ಹರೀಶ್ ಪೂಂಜರನ್ನು ಬಂಧಿಸದಿರುವುದು ಖಂಡನೀಯ: ಬಿ.ಎಂ. ಭಟ್

ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: ಸರಕಾರದ ಕರ್ತವ್ಯಕ್ಕೆ ಅಡ್ಡಿ, ಪೊಲೀಸರಿಗೆ ಬೆದರಿಕೆ, ಸರಕಾರಿ ಅಧಿಕಾರಿಗಳಿಗೆ ನಿಂದನೆ, ದಮ್ಕಿ ಹಾಕಿದ ಪ್ರಕರಣದ ಆರೋಪಿ ಶಾಸಕ ಹರೀಶ್ ಪೂಂಜರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸುವಲ್ಲಿ ಸರಕಾರದ ನಿರ್ಲಕ್ಷತೆ ಖಂಡನೀಯ ಎಂದು ಸಿಪಿಐಎಂ ಮುಖಂಡರಾದ ಬಿ.ಎಂ.ಭಟ್ ಹೇಳಿದ್ದಾರೆ.
ಐಪಿಸಿಯಲ್ಲಿ ಇರುವ ಕಾನೂನು, ನಿಯಮಗಳು ಎಲ್ಲಾ ಭಾರತೀಯ ಪ್ರಜೆಗಳಿಗೆ ಸಮನಾಗಿರುವಾಗ, ಶಾಸಕರೆಂಬ ಕಾರಣಕ್ಕೆ ಬಂಧಿಸದಿರಲು ಆ ಕಾನೂನಿನ ಬಲಿಷ್ಟತೆ ಕಡಿಮೆಯಾಯಿತೇ ಎಂದು ಅವರು ಸರಕಾರವನ್ನು ಪ್ರಶ್ನಿಸಿದರು. ಹೋರಾಟಕ್ಕೂ ಅದರದ್ದೇ ಒಂದು ಮಹತ್ವ ಇದ್ದು ಹೋರಾಟದ ಮೂಲಕ ಪಡೆದ ಎಲ್ಲಾ ಕಾನೂನು ಸವಲತ್ತುಗಳನ್ನು ಕೇಂದ್ರದ ಮೋದಿ ಸರಕಾರ ಖಾಸಗೀಯವರಿಗೆ ಮೂರು ಕಾಸಿಗೆ ನೀಡುವ ಮೂಲಕ ಎಲ್ಲವನ್ನೂ ನಾಶ ಮಾಡುತ್ತಿರುವಾಗ ಬೆಳ್ತಂಗಡಿ ಶಾಸಕರಿಗೆ ಬಾರದಿದ್ದ ಸಿಟ್ಟು ಓರ್ವ ರೌಡಿಶೀಟರ್ನನ್ನು ಬಂಧಿಸುವಾಗ ಯಾಕೆ ಬಂತು ಎಂದು ಅವರು ಪ್ರಶ್ನಿಸಿದರು.
ಅತ್ಯಾಚಾರ ಮಾಡಿ ಕೊಲೆ ಮಾಡಿ ಜೈಲು ಪಾಲಾದವರನ್ನು ಬಿಡುಗಡೆಗೊಳಿಸಿ ಬಿಜೆಪಿಯವರು ಸನ್ಮಾನಿಸಿದಾಗ, ಮಣಿಪುರದಲ್ಲಿ ಸಂಘಪರಿವಾರ ಹಿಂದು ಧರ್ಮದ ಹೆಸರಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ನಡೆಸಿ ಅತ್ಯಾಚಾರ ಮಾಡಿ ಹಿಂದು ಧರ್ಮದ ಮತ್ತು ತಾಯಂದಿರ ಮಾನ ತೆಗೆದಾಗ, ಸೌಜನ್ಯ ಪ್ರಕರಣಕ್ಕೆ ನ್ಯಾಯಕೊಡಿಸಲಾ ಗದಾಗ ಬೆಳ್ತಂಗಡಿ ಶಾಸಕರಿಗೆ ಬಾರದ ಸಿಟ್ಟು ಈಗ ಯಾಕೆ ಬರುತ್ತಿದೆ. ಬಿಜೆಪಿ ಪಕ್ಷದಲ್ಲಿ ಕ್ರಿಮಿನಲ್ಸ್ ಗಳಿಗಷ್ಟೇ ಇರಲು ಅವಕಾಶ ಇರುವುದೆಂಬ ಸತ್ಯ ಎಲ್ಲರಿಗೂ ಗೊತ್ತಾಗಿದ್ದು ಅದನ್ನು ಅವರು ನಿರೂಪಿಸಿದ್ದಾರೆ. ಕೋಮುವಾದಿಗಳಾಗಿ ಇರುವುದೆಂದರೆ ಅದು ಕ್ರಿಮಿನಲ್ಸ್ಗಳೆಂದೇ ಅರ್ಥ ಎಂದವರು ಟೀಕಿಸಿದರು.
ಸರಕಾರಿ ನೌಕರರನ್ನು ಅವಾಚ್ಯ ಶಬ್ದದಿಂದ ಕರೆದು ಭಾರತೀಯ ಪ್ರಜೆಗಳನ್ನು ಮೈಗಳ್ಳರು ಎಂದು ಸಮರ್ಥನೆ ನೀಡಿರು ವುದು ನಾಚಿಕೆಯ ವಿಚಾರ. ಬೀಡಿ ಕಾರ್ಮಿಕರಿಗೆ 6 ವರ್ಷದ ಬಾಕಿ ಇರುವ ವೇತನ ಕೊಡಿಸಲು ದುಡಿಯದ ಶಾಸಕರು ಮೈಗಳ್ಳತನ ತೋರಿಸುತ್ತಿದಾರೆ. ಮಾತ್ರವಲ್ಲ ಈ ರೀತಿ ಮಾತಾಡಲು ತನಗೆ ಕಾರ್ಯಕರ್ತರೇ ಶಕ್ತಿ ಎಂದು ಹೇಳುವ ಶಾಸಕರಿಗೆ ಸೌಜನ್ಯಳಿಗೆ ನ್ಯಾಯ ಕೊಡಿಸಲು ಮಾತ್ರ ಇದುವರೆಗೆ ಸಾಧ್ಯವಾಗಿಲ್ಲ ಎಂದು ಬಿ.ಎಂ.ಭಟ್ ತಿಳಿಸಿದರು.
ಬೆಳ್ತಂಗಡಿಯ ಶಾಸಕರು ವಕೀಲರನ್ನು ಪೊಟ್ಟು ವಕೀಲರೆಂದು ಅವಮಾನಿಸುವುದರೊಂದಿಗೆ ತಾನೊಬ್ಬ ಹಿಂದುತ್ವವಾದಿ ಎನ್ನುವುದರ ಜೊತೆಗೆ ಇತರ ಹಿಂದುಗಳನ್ನು ಅವಮಾನಿಸುತ್ತಿದ್ದಾರೆ. ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿ ಗಲಭೆ ಎಬ್ಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಮೂಲಕ ನಮ್ಮೆಲ್ಲರ ಮಾತಾ-ಪಿತೃ ಸಮಾನರಾದ ಹಿರಿಯರು ಕಟ್ಟಿ ಬೆಳೆಸಿದ ಭಾರತದ ಸಂವಿಧಾನಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದು ಇಂತಹ ಕ್ರಿಮಿನಲ್ಸ್ ಗಳನ್ನು ಬಂಧಿಸಲು ಸರಕಾರ ಹಿಂಜರಿಯಬಾರದು. ಸರಕಾರ ಇಂತಹವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.







