ಶಾಲಾ ಮಕ್ಕಳ ಸಾಗಾಟದ ಖಾಸಗಿ ವಾಹನಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಧರಣಿ

ಮಂಗಳೂರು: ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಖಾಸಗಿ ವಾಹನ (ವೈಟ್ ಬೋರ್ಡ್)ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಿ ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ನೇತೃತ್ವದಲ್ಲಿ ವಾಹನ ಚಾಲಕರು ನಗರದ ಕ್ಲಾಕ್ ಟವರ್ ಬಳಿ ಗುರುವಾರ ಧರಣಿ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಶಾಲಾ ಮಕ್ಕಳ ವಾಹನ ಚಾಲಕರು ಘೋಷಣೆಗಳನ್ನು ಕೂಗುತ್ತಾ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ಘಾಟಿಸಿದ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬಿಳಿ ಬಣ್ಣದ ಖಾಸಗಿ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಘಟನೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.ಈ ಬಗ್ಗೆ ಹಲವಾರು ಬಾರಿ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿದ್ದರೂ ಈವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಪೊಲೀಸ್ ಇಲಾಖೆ ಖಾಸಗಿ ವಾಹನಗಳ ಬಗ್ಗೆ ಮೃದು ಧೋರಣೆ ತೋರಿದರೆ ಅದು ಎಳೆಯ ಪ್ರಾಯದ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ.ಕ.ಜಿಲ್ಲಾ ಟ್ಯಾಕ್ಸಿ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಆನಂದ ಮಾತನಾಡಿ ಸಾರಿಗೆ ಇಲಾಖೆಯ ಎಲ್ಲ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಪ್ರಾಮಾಣಿಕವಾಗಿ ದುಡಿಯುವ ಟೂರಿಸ್ಟ್ ವಾಹನಗಳ ಬಗ್ಗೆ ಸದಾ ಕೆಂಗಣ್ಣು ಬೀರುವ ಸಾರಿಗೆ ಅಧಿಕಾರಿಗಳು,ವಾಹನ ಸಂಚಾರ ನಿಯಮಗಳನ್ನೇ ಗಾಳಿಗೆ ತೂರಿ ಹಾಡುಹಗಲಲ್ಲೇ ಶಾಲಾ ಮಕ್ಕಳನ್ನು ಬಿಳಿ ಬಣ್ಣದ ಖಾಸಗಿ ವಾಹನಗಳಲ್ಲಿ ಸಾಗಿಸುತ್ತಿರುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ಅವರು ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಖಾಸಗಿ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟವನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಂಘದ ಕಾರ್ಯಾಧ್ಯಕ್ಷ ಲೋಕೇಶ್ ಸುರತ್ಕಲ್ , ಅಧ್ಯಕ್ಷ ಮೋಹನ್ ಕುಮಾರ್ ಅತ್ತಾವರ ಮಾತನಾಡಿದರು. ಜಿಲ್ಲಾ ಮುಖಂಡರಾದ ಸ್ಟೇನಿ ಮಿನೇಜಸ್, ಕಿರಣ್ ಲೇಡಿಹಿಲ್, ದಿನೇಶ್ ಕುಂಜತ್ತಬೈಲ್, ಶರತ್ ಸುರತ್ಕಲ್,ಶ್ರೀಕಾಂತ್ ಬಿ.ಸಿ.ರೋಡ್,ಬೆಂಜಮಿನ್ ವೇಗಸ್,ಶಂಕರ್ ಶೆಟ್ಟಿ, ಪ್ರವೀಣ್ ಲೇಡಿಹಿಲ್, ರಾಜೇಶ್ ಕುಳಾಯಿ, ಮುನ್ನ ಪದವಿನಂಗಡಿ,ಸತೀಶ್ ಪೂಜಾರಿ,ನರೇಂದ್ರ ಹೊಯ್ಗೆಬೈಲ್, ಚಿತ್ತರಂಜನ್ ಸುವರ್ಣ ಮುಂತಾದವರು ವಹಿಸಿದ್ದರು.
ಟ್ಯಾಕ್ಸಿ ಮೆನ್ ಅಸೋಸಿಯೇಷನ್‌ನ ಮುಖಂಡ ಕಮಲಾಕ್ಷ, ಕೆಟಿಡಿಒ ಸಂಘಟನೆಯ ಕಾರ್ಯದರ್ಶಿ ಸೂರಜ್ ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಸಂಘದ ಉನ್ನತ ಮಟ್ಟದ ನಿಯೋಗವೊಂದು ಆರ್‌ಟಿಒ ಅಧಿಕಾರಿಗಳು,ನಗರ ಪೊಲೀಸ್ ಆಯುಕ್ತರು ಹಾಗೂ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.







