ದ.ಕ.ಜಿಲ್ಲೆಯಲ್ಲಿ ಮುಂದುವರಿದ ಮಳೆ: ರೆಡ್ ಅಲರ್ಟ್ ಘೋಷಣೆ
► ಹಲವೆಡೆ ಅಪಾರ ಹಾನಿ ► ಶಾಲೆ-ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗುರುವಾರವೂ ಮಳೆಯ ಅಬ್ಬರವಿತ್ತು. ಭಾರೀ ಗಾಳಿ ಮಳೆಗೆ ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆ ಬಿದ್ದು ಹಾನಿಯಾದ ಮತ್ತು ಗುಡ್ಡಗಳು ಜರಿದ ಘಟನೆ ವರದಿಯಾಗಿದೆ. ಗುರುವಾರ ಮಧ್ಯಾಹ್ನದ ಬಳಿಕ ಜಿಲ್ಲೆಯಲ್ಲಿ ಮೋಡ ಕವಿದ ಮಾತಾವರಣವಿತ್ತು. ಬುಧವಾರ ರಾತ್ರಿ ಸತತ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ.
ನಗರದ ಜಪ್ಪು, ಗುಜ್ಜರಕೆರೆ, ಕೋಡಿಕಲ್, ಜಪ್ಪಿನಮೊಗರು, ಕೊಟ್ಟಾರ ಚೌಕಿ ಮತ್ತಿತರ ಕೆಲವು ಕಡೆಗಳಲ್ಲಿ ಮಳೆ ನೀರು ಮನೆಯೊಳಗೆ ಹರಿದು ಬಂದಿರುವ ಬಗ್ಗೆ ವರದಿಯಾಗಿದೆ. ಕೊಟ್ಟಾರ ಚೌಕಿಯ ರಾಜಕಾಲುವೆಯ ಕಬ್ಬಿಣದ ಹಿಡಿಕೆಯ ರಾಡ್ ಮಳೆಗೆ ಕೊಚ್ಚಿ ಹೋದ ಪರಿಣಾಮ ಆತಂಕ ಸೃಷ್ಟಿಯಾಗಿದೆ.
ಬಜ್ಪೆ ಸಮೀಪದ ಕೆಂಜಾರಿನಲ್ಲಿ ಚರಂಡಿ ನೀರು ಹರಿಯುವುದಕ್ಕೆ ಸಣ್ಣ ಪೈಪ್ ಹಾಕಲಾಗಿತ್ತು. ಸತತ ಮಳೆಗೆ ಗುಡ್ಡದಿಂದ ಹರಿದು ಬಂದ ಮಳೆ ನೀರು ಪೂರ್ತಿಯಾಗಿ ಸ್ಥಳೀಯ ಮನೆ, ತೋಟ ಮತ್ತು ಗದ್ದೆಗೆ ನುಗ್ಗಿದೆ. ಈ ಭಾಗದ 20ಕ್ಕೂ ಅಧಿಕ ಮನೆಗಳಿಗೆ ಬುಧವಾರ ರಾತ್ರಿ ನೀರು ನುಗ್ಗಿತ್ತು ಎಂದು ತಿಳಿದು ಬಂದಿದೆ.
ಸಂತ್ರಸ್ಥರ ಸ್ಥಳಾಂತರಕ್ಕೆ ಸೂಚನೆ
ಬುಧವಾರ ರಾತ್ರಿ ನಿರಂತರವಾಗಿ ಸುರಿದ ಮಳೆಗೆ ಬಜ್ಜೋಡಿ ಸಂದೇಶ ಕಲಾ ಕೇಂದ್ರದ ಬಳಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಪಡೀಲ್‌ನ ವೀರನಗರದಲ್ಲಿ ಮರ ಉರುಳಿ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಸುರತ್ಕಲ್‌ನ ಸುಭಾಷಿತ ನಗರದಲ್ಲಿ ಕಾಂಪೌಂಡ್ ಗೋಡೆ ಮಗುಚಿ ಬಿದ್ದು ಹಾನಿಯಾಗಿದೆ. ಅಳಪೆ ಕಣ್ಣಗುಡ್ಡೆಯಲ್ಲಿ ಕಾಂಪೌಂಡ್ ಗೋಡೆ ಕುಸಿದಿದೆ. ಕುದ್ರೋಳಿ ಕಂಡತ್‌ಪಲ್ಲಿಯಲ್ಲಿ ಮನೆಯೊಂದು ಬೀಳುವ ಸ್ಥಿತಿಯಲ್ಲಿದ್ದು, ಅಲ್ಲಿ ವಾಸವಾಗಿರುವ ನಿವಾಸಿಗಳನ್ನು ಬೇರೆ ಕಡೆಯಲ್ಲಿ ಸ್ಥಳಾಂತರ ಮಾಡಲಾಗಿದೆ. ಬಂಗ್ರ ಕೂಳೂರಿನ ಮಾಲಾಡಿ ಕೋರ್ಟ್ ರಸ್ತೆಯ ಪಂಜಿಮೊಗರು ವಾರ್ಡ್‌ನಲ್ಲಿ ಗುಡ್ಡ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅಲ್ಲಿರುವ ಅಸುಪಾಸಿನ ಮನೆಗಳ ನಿವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
*ರೆಡ್ ಅಲರ್ಟ್ ಘೋಷಣೆ
ಹವಾಮಾನ ಇಲಾಖೆಯು ದ.ಕ.ಜಿಲ್ಲೆಯಲ್ಲಿ ಶುಕ್ರವಾರ ರೆಡ್ ಅಲರ್ಟ್ ಘೋಷಿಸಿದೆ. ಜೂನ್ 29ರ ಬಳಿಕ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗುವ ಲಕ್ಷಣಗಳಿವೆ. ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಡಿ, ಶಿರಾಡಿ, ಆಗುಂಬೆ ಸುತ್ತಮುತ್ತ ಜುಲೈ 1ರ ಬಳಿಕ ಉತ್ತಮ ಮಳೆಯ ಮುನ್ಸೂಚೆನೆಯನ್ನು ಹವಾಮಾನ ಇಲಾಖೆಯು ನೀಡಿದೆ.
ನದಿ ನೀರಿನ ಮಟ್ಟ ಏರಿಕೆ
ಕಳೆದ ರಡು ದಿನಗಳಿಂದ ಪಶ್ಚಿಮಘಟ್ಟದ ತಪ್ಪಲಿನ ನದಿಮೂಲಗಳಲ್ಲಿ ಉತ್ತಮ ಮಳೆಯಾದ ಕಾರಣ ಜಿಲ್ಲೆಯ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಉಪ್ಪಿನಂಗಡಿಯ ನೇತ್ರಾವತಿ ಮತ್ತು ಕುಮಾರಧಾರ ನದಿಯು 27.2 ಮೀಟರ್ ಹಾಗೂ ಬಂಟ್ವಾಳ ನೇತ್ರಾವತಿ ನದಿಯು ಮಟ್ಟ 5 ಮೀಟರ್‌ಗಳಲ್ಲಿ ಹರಿಯುತ್ತಿತ್ತು. ನೇತ್ರಾವತಿ ನದಿಯಲ್ಲಿ ಮಳೆ ನೀರಿನ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ತುಂಬೆ ಡ್ಯಾಂನ ಎಲ್ಲಾ ಗೇಟ್‌ಗಳನ್ನೂ ತೆರವು ಮಾಡಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ
ಜೂನ್ 29ರವರೆಗೆ ಜಿಲ್ಲೆಯಲ್ಲಿ ಗಂಟೆಗೆ 38 ಕಿಮೀನಿಂದ 46 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.
ಶಾಲೆ-ಪಿಯು ಕಾಲೇಜುಗಳಿಗೆ ರಜೆ
ದ.ಕ.ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜೂ.28(ಶುಕ್ರವಾರ) ರಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮತ್ತು ಪಿಯು ಕಾಲೇಜುಗಳಿಗೆ ರಜೆ ನೀಡಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಸಾರಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.







