ಉಳ್ಳಾಲದಲ್ಲಿ ಸಮುದ್ರ ಪ್ರಕ್ಷುಬ್ಧ: ಅಪಾಯದಲ್ಲಿ ಮನೆಗಳು

ಉಳ್ಳಾಲ: ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಡಲ್ಕೊರೆತ ತೀವ್ರ ಸ್ವರೂಪ ಪಡೆದು ಕೊಂಡಿದೆ. ಉಳ್ಳಾಲ ನಗರ ಸಭಾ ವ್ಯಾಪ್ತಿಯ ಖಿಲಿರಿಯ ನಗರ, ಕೈಕೊ ಪ್ರದೇಶದಲ್ಲಿ ಕಡಲಿನಬ್ಬರ ತೀವ್ರ ಸ್ವರೂಪ ಪಡೆದುಕೊಂಡ ಕಾರಣ ಸಮುದ್ರದ ಅಲೆ ತಡೆಗೋಡೆ ದಾಟಿ ಬರುತ್ತಿದೆ.
ಖಿಲಿರಿಯ ನಗರ ದಲ್ಲಿ ಮಸೀದಿ ಹಾಗೂ ಕೆಲವು ಮನೆಗಳಿಗೆ ತಡೆಗೋಡೆ ದಾಟಿ ಸಮುದ್ರ ದ ಅಲೆ ಬಡಿಯುತ್ತಿದ್ದು, ಇಲ್ಲಿ ವಾಸ ಮಾಡುತ್ತಿರುವ ಕುಟುಂಬ ಆತಂಕಕ್ಕೆ ಈಡಾಗಿದೆ. ಇಲ್ಲಿ ಒಟ್ಟು 40 ಅಧಿಕ ಮನೆಗಳಿದ್ದು ಅಪಾಯದಲ್ಲಿದೆ.
ಖಿಲಿರಿಯ ನಗರ ನಿವಾಸಿ ಹಮೀದ್ ಅವರ ಬಾಳೆ ಕೃಷಿ ಸಮುದ್ರ ಪಾಲಾಗಿದೆ. ಸಮೀಪದಲ್ಲೇ ಇರುವ ಹಮೀದ್ ಕಣ್ಣೂರು ಅವರ ಮನೆ ಅಪಾಯದಲ್ಲಿ ಇದ್ದು, ಈ ಮನೆಯಲ್ಲಿ ಮಕ್ಕಳು ಸೇರಿ 12 ಜನ ಇದ್ದಾರೆ.
ಕಡಲ್ಕೊರೆತ ತಡೆಗೆ ಬಂದರ್ ಇಲಾಖೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಿ ಹಾಕಿದ ಕಲ್ಲಿನ ಅರ್ಧ ಭಾಗದಷ್ಟು ಕಲ್ಲು ಸಮುದ್ರ ಪಾಲಾಗಿದೆ. ಇದರಿಂದ ಜಾಸ್ತಿ ಅಪಾಯಕಾರಿ ಆಗಿ ಪರಿಣಮಿಸಿದ್ದು ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಗರಸಭೆ ಕೌನ್ಸಿಲರ್ ಖಲೀಲ್ ತಿಳಿಸಿದ್ದಾರೆ
ಖಿಲಿರಿಯ ನಗರ ದಲ್ಲಿ ಸಮುದ್ರಪ್ರಕ್ಷುಬ್ಧಗೊಂಡ ಬಗ್ಗೆ ಮಾಹಿತಿ ಮೇರೆಗೆ ಬಂದರ್ ಇಲಾಖೆ ಇಂಜಿನಿಯರ್ ರಾಜೇಶ್, ನಗರಸಭೆ ಪೌರಾಯುಕ್ತ ವಾಣಿ ಆಳ್ವ, ಇಂಜಿನಿಯರ್ ತುಳಸಿದಾಸ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಪೌರಾಯುಕ್ತ ಅವರು ಅಪಾಯದಂಚಿನಲ್ಲಿರುವ ಮನೆ ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿ ಅವರ ಆದೇಶ ಇದೆ. ಇದಕ್ಕಾಗಿ ಒಂಭತ್ತು ಕೆರೆ ಬಳಿ ಕಾಳಜಿ ಕೇಂದ್ರ ಮಾಡಲಾಗಿದೆ. ಸಮುದ್ರ ದ ಅಲೆ ತೀರ್ವಗೊಂಡ ಕಾರಣ ಇಲ್ಲಿರುವ ಕುಟುಂಬಗಳು ಸ್ಥಳಾಂತರ ಆಗಬೇಕು ಎಂದು ಸೂಚಿಸಿದರು. ಜಾಸ್ತಿ ಅಪಾಯದಲ್ಲಿ ಇರುವ ಹಮೀದ್ ಕಣ್ಣೂರು ಅವರ ಮನೆಗೆ ತೆರಳಿದ ಅವರು ಸ್ಥಳಾಂತರಗೊಳ್ಳಬೇಕು ಎಂದು ವಿನಂತಿಸಿದಲ್ಲದೆ ಸ್ಥಳಾಂತರ ಗೊಳಿಸಲು ಜಿಲ್ಲಾಧಿಕಾರಿ ಅವರ ಕಟ್ಟುನಿಟ್ಟಿನ ಆದೇಶ ಇದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಮೀದ್ ಕಣ್ಣೂರು ಅವರು ,ನಾವು 12 ಜನ ಇದ್ದು, ಕುಟುಂಬದ ಮನೆಗೆ ಹೋಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಗರ ಸಭೆ ಆರೋಗ್ಯ ಅಧಿಕಾರಿ,ಲಿಲ್ಲಿ ನಾಯರ್, ಇಂಜಿನಿಯರ್ ತುಳಸಿದಾಸ್ ಉಪಸ್ಥಿತರಿದ್ದರು.







