ಮಂಗಳೂರು: ಶಾಸಕ ಐವನ್ ಡಿಸೋಜಗೆ ಸನ್ಮಾನ

ಮಂಗಳೂರು: ಅಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫಾರಂ ಫಾರ್ ಹೂಮನ್ ರೈಟ್ಸ್ ವೆಸ್ಟರ್ನ್ ಝೋನ್ (ಎಕೆಯುಸಿಎಫ್‌ಎಚ್‌ಆರ್) ವತಿಯಿಂದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರನ್ನು ಶನಿವಾರ ನಗರದ ಬಿಷಪ್ ಹೌಸ್‌ನಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜ ರಾಜಕಾರಣದಲ್ಲಿ ಶ್ರದ್ಧೆ, ಬದ್ಧತೆ ಮುಖ್ಯ. ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದರೆ ಉನ್ನತ ಸ್ಥಾನಕ್ಕೇರಲು ಸಾಧ್ಯ. ರಾಜಕೀಯವು ಎಂದಿಗೂ ನಿಂತ ನೀರಲ್ಲ ಅಧಿಕಾರ ಸಿಕ್ಕಾಗ ಜನರ ಸೇವೆ ಯನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಹೇಳಿದರು.
2014ರಲ್ಲಿ ಎಂಎಲ್‌ಸಿ ಆಗಿದ್ದಾಗ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 7.50 ಕೋ.ರೂ. ರೋಗಿಗಳಿಗೆ ಕೊಟ್ಟಿ ದ್ದೇನೆ. ವಿದ್ಯಾರ್ಥಿ ಹಂತದಿಂದ ಬೆಳೆದುಕೊಂಡು ರಾಜಕೀಯದಲ್ಲಿ ಸಾಕಷ್ಟು ಹಂತಗಳನ್ನು ದಾಟಿಕೊಂಡು ಇಲ್ಲಿಗೆ ಬಂದು ಮುಟ್ಟಿ ದ್ದೇನೆ ಎಂದು ಐವನ್ ಡಿಸೋಜ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಶಾಸಕ ಐವನ್ ಡಿಸೋಜ ಅವರಲ್ಲಿ ತಳಮಟ್ಟದಲ್ಲಿರುವ ಮಂದಿಗೆ ಮಿಡಿಯುವ ಮನಸ್ಸಿದೆ. ಪ್ರತಿಯೊಂದು ವಿಚಾರದಲ್ಲೂ ಅವರ ಧೈರ್ಯ ಮೆಚ್ಚುವಂತದ್ದು. ಪ್ರತಿಯೊಂದು ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಅವರಿಗೆ ಇದೆ. ಸರಕಾರ ಅವರಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಳ್ಳಲಿ ಎಂದು ಆಶಿಸಿದರು.
ಚರ್ಚ್ ಆಫ್ ಸೌತ್ ಇಂಡಿಯಾ, ಕರ್ನಾಟಕ ಸದರ್ನ್ ಧರ್ಮಪ್ರಾಂತ್ಯದ ಬಿಷಪ್ ರೆ. ಹೇಮಚಂದ್ರ ಕುಮಾರ್, ಎಡಪದವಿನ ಬಿಲಿವರ್ಸ್ ಚರ್ಚ್‌ನ ಬಿಷಪ್ ಎಚ್‌ಜಿ. ಜೋಸೆಫ್ ಮಾರ್ ಡೆಮಾಟ್ರಿಯಸ್ ಮಾತನಾಡಿದರು.
ಈ ಸಂದರ್ಭ ಎಕೆಯುಸಿಎಫ್‌ಎಚ್‌ಆರ್ ಕಾರ್ಯದರ್ಶಿ ರೆ.ಗೋಲ್ಡರಿನ್ ಬಂಗೇರಾ ಉಪಸ್ಥಿತರಿದ್ದರು. ಧರ್ಮಪ್ರಾಂತದ ಪಿಆರ್‌ಒ ರೋಯ್ ಕ್ಯಾಸ್ಟೋಲಿನೋ ಸನ್ಮಾನ ಪತ್ರ ವಾಚಿಸಿದರು. ಎಕೆಯುಸಿಎಫ್‌ಎಚ್‌ಆರ್ ಖಜಾಂಚಿ ಫಾ. ರೂಪೇಶ್ ಮಾಡ್ತಾ ಸ್ವಾಗತಿಸಿದರು. ಎಕೆಯುಸಿಎಫ್‌ಎಚ್‌ಆರ್ ಜತೆ ಖಜಾಂಚಿ ಫಾ.ಎಂ.ಪ್ರಭುರಾಜ್ ಪ್ರಾರ್ಥಿಸಿದರು. ಧರ್ಮಪ್ರಾಂತದ ಪಿಆರ್‌ಒ ಡಾ. ಜೆ. ಬಿ. ಸಲ್ಡಾನ ವಂದಿಸಿದರು. ಧರ್ಮಪ್ರಾಂತದ ಕಾರ್ಯದರ್ಶಿ ಜಾನ್ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.







