ಕಾರ್ಮಿಕ ಮಂಡಳಿಯ ಹೊಸ ತಂತ್ರಾಂಶದ ದೋಷ ಸರಿಪಡಿಸಲು ಮನವಿ

ಮಂಗಳೂರು, ಜೂ.29: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಂಡಳಿಯ ಹೊಸ ತಂತ್ರಾಂಶದ ದೋಷ ಸರಿಪಡಿ ಸಲು ಮತ್ತು ಶೈಕ್ಷಣಿಕ ಧನಸಹಾಯ ಹಾಗೂ ಕಟ್ಟಡ ಕಾರ್ಮಿಕರ ಇತರ ಸೌಲಭ್ಯ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕು ಎಂದು ಪ್ರಗತಿಪರ ದ.ಕ. ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ರಿ) ವು ಕಾರ್ಮಿಕ ನಿರೀಕ್ಷಕರ ಮೂಲಕ ಕಲ್ಯಾಣ ಮಂಡಳಿಯ ಕಾರ್ಯನಿರ್ವಹಾಣಾಧಿಕಾರಿಗೆ ಮನವಿ ಸಲ್ಲಿಸಿದೆ.
ಕಟ್ಟಡ ಕಾರ್ಮಿಕರು ಮಂಡಳಿಗೆ ನೋಂದಣಿಯಾಗುವ ಸಂದರ್ಭ ವೈದ್ಯರ ಮುಖಾಂತರ ವಯಸ್ಸಿನ ದಾಖಲೆಯನ್ನು ನೀಡಿ ಗುರುತಿನ ಚೀಟಿ ಪಡೆದುಕೊಂಡಿರುತ್ತಾರೆ. ಆದರೆ ಈಗ ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್‌ನಲ್ಲಿರುವ ವಯಸ್ಸು ಹಾಗೂ ಮೂಲ ಗುರುತಿನ ಚೀಟಿಯಲ್ಲಿ ಜನನ ದಿನಾಂಕ ವ್ಯತ್ಯಾಸ ಇದೆ ಎಂದು ಕಾರಣ ನೀಡಲಾಗುತ್ತದೆ. ಹಾಗಾಗಿ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೂಲ ಗುರುತಿನ ಚೀಟಿಯನ್ನು ಪರಿಗಣಿಸಿ ಪಿಂಚಣಿ ನೀಡಬೇಕು. ಮಂಡಳಿಯಿಂದ ಕಾರ್ಮಿಕರಿಗೆ ಕಿಟ್ ಹಾಗೂ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಲ್ಲಿಸಿ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕ ರಿಗೆ ನೇರವಾಗಿ ಒದಗಿಸಬೇಕು. ಎಲ್ಲಾ ಜಿಲ್ಲಾ ಕಾರ್ಮಿಕ ಇಲಾಖಾ ಕೇಂದ್ರಗಳಲ್ಲಿ ಕಟ್ಟಡ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪ್ರತೀ ತಿಂಗಳು ಅದಾಲತ್ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ.ಇ, ಅಚ್ಯುತ ಕಟ್ಟೆ, ರಾಜೀವ ಅಳಿಕೆ ನಿಯೋಗದಲ್ಲಿದ್ದರು.





