ಟಿಡಿಆರ್ ಡೀಲ್‌ಗೆ ಹಿನ್ನಡೆ: ಮೇಯರ್ ಸುಧೀರ್ ಶೆಟ್ಟಿ ರಾಜೀನಾಮೆಗೆ ಆಗ್ರಹ

ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಟಿಡಿಆರ್ ಡೀಲ್‌ಗೆ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೆ ಅಜೆಂಡಾ ಇದ್ದರೂ ಕೂಡ ಚರ್ಚೆಗೆ ಬರುವ ಮುನ್ನವೇ ಮುಂದೂಡಲ್ಪಟ್ಟಿದೆ. ಹಾಗಾಗಿ ನೈತಿಕ ಹೊಣೆ ಹೊತ್ತು ಮೇಯರ್ ಸುಧೀರ್ ಶೆಟ್ಟಿ ರಾಜೀನಾಮೆ ಸಲ್ಲಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಟಿಡಿಆರ್ ಡೀಲ್ ವಿಷಯವು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಜೆಂಡಾ ಆಗಿದೆ ಮತ್ತು ಮೇಯರ್ ಪೂರ್ವಭಾವಿ ಅನುಮೋದನೆ ನೀಡಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಧ್ವನಿ ಎತ್ತಿದ್ದರ ಪರಿಣಾಮ ಈ ಬೆಳವಣಿಗೆ ನಡೆದಿದೆ. ಈ ಎರಡು ಟಿಡಿಆರ್ ಫೈಲ್‌ಗಳಲ್ಲದೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಫೈಲ್‌ಗಳು ಕೂಡ ಅಜೆಂಡಾದಲ್ಲಿ ಸೇರಿದ್ದವು. ಅವುಗಳನ್ನು ಸಾಮಾನ್ಯ ಸಭೆಯಲ್ಲಿ ಅನುಮೋದನೆಗಾಗಿ ಇಡಲಾಗಿತ್ತು. ಆದರೆ ಚರ್ಚೆಗೆ ಬರುವ ಮುನ್ನವೇ ಮುಂದೂಡಲ್ಪಟ್ಟ ಕಾರಣ ಮೇಯರ್‌ಗೆ ಮುಖಭಂಗವಾಗಿದೆ. ಪಾಲಿಕೆಯ ಪರಿಷತ್‌ನ ವಿಶ್ವಾಸ ಕಳೆದುಕೊಂಡಿರುವ ಮೇಯರ್ ಸುಧೀರ್ ಶೆಟ್ಟಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.





