ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ವಿತ್ತ ಸಚಿವರಿಗೆ ಕ್ಯಾಂಪ್ಕೊ ಮನವಿ
ಮಂಗಳೂರು: ವಿತ್ತ ಸಚಿವರಾಗಿ ಮರು ನೇಮಕಗೊಂಡಿರುವ ನಿರ್ಮಲಾ ಸೀತರಾಮನ್ ಅವರನ್ನು ಅಭಿನಂದಿಸಿರುವ ಕ್ಯಾಂಪ್ಕೊ ಆಡಳಿತ ಮಂಡಳಿಯು ಇದೇ ಸಂದರ್ಭದಲ್ಲಿ ಅಡಿಕೆ ಮಾರುಕಟ್ಟೆಯ ಚೇತರಿಕೆಗೆ ಉತ್ತೇಜನ ನೀಡಲು ಮತ್ತು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದೆ.
ಅಡಿಕೆಯ ಮೇಲಿನ ಜಿಎಸ್‌ಟಿಯನ್ನು ಶೇ೫ರಿಂದ ೨ಕ್ಕೆ ಇಳಿಸಬೇಕು. ಮೈಲುತುತ್ತು ಮೇಲಿನ ಜಿಎಸ್‌ಟಿಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಲು ಮತ್ತು ಕಾರ್ಬನ್ ಫೈಬರ್ ದೋಟಿಯ ಆಮದು ಸುಂಕವನ್ನು ಕಡಿತಗೊಳಿಸಲು ಮನವಿ ಮಾಡಿದೆ. ಅಡಿಕೆ ಮತ್ತು ಕರಿಮೆಣಸು ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಹೊಂದಿದೆ.ಆದರೂ,ಇವೆರಡರ ಅಕ್ರಮ ಆಮದು ಅವ್ಯಾಹತವಾಗಿ ನಡೆಯುತ್ತಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಇದು ರೈತರ ಜೀವನೋಪಾಯಕ್ಕೆ ಮಾರಕವಾಗಿದೆ ಆದುರಿಂದ ಅಡಿಕೆ ಮತ್ತು ಕರಿಮೆಣಸಿನ ಅಕ್ರಮ ಆಮದನ್ನು ತಡೆಗಟ್ಟಲು ಆಗ್ರಹಿಸಿದೆ. ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಗೆ ಕನಿಷ್ಠ ಬೆಲೆ ನಿಗದಿ ಪಡಿಸಲು ಮನವಿ ಮಾಡಿದೆ.
ಎಲ್ಲಾ ದೊಡ್ಡ ಸರಕು ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸಬೇಕು ಮತ್ತು ಎಲ್ಲಾ ತಪಾಸಣಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಿ ತಪಾಸಣೆ ನಡೆಸುವುದರ ಮೂಲಕ ಅಕ್ರಮ ವ್ಯವಹಾರವನ್ನು ತಡೆಯಬಹುದು. ಸಿಜಿಎಸ್ ಟಿ,ಎಸ್ ಜಿ ಎಸ್‌ಟಿ ಮತ್ತು ಐಜಿಎಸ್‌ಟಿ ಮುಂತಾದ ಬಹು ಸ್ತರದ ತೆರಿಗೆಯ ಬದಲು ಸರಳ ಮತ್ತು ಏಕೀಕೃತ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿ ಸರಳಗೊಳಿಸಬೇಕು. ಜಿಎಸ್‌ಟಿಯ ಐಟಿಸಿ ಪೋರ್ಟಲ್ ಅಡಿಯಲ್ಲಿ ಕೆವೈಸಿ ಹೊಂದಾಣಿಕೆಯಾಗದೇ ಹೊದರೆ ತೆರಿಗೆ ಪಾವತಿದಾರರನ್ನು ಹೊಣೆಗಾರರನ್ನಾಗಿಸುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಮತ್ತು ಇದಕ್ಕೆ ಸಂಬಂಧಪಟ್ಟ ಇಲಾಖೆಗಳೇ ಜವಾಬ್ದಾರರಾಗಬೇಕು ಎಂದು ಕ್ಯಾಂಪ್ಕೊ ಹೇಳಿದೆ.
ಅಡಿಕೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ,ನಮ್ಮ ದೇಶದಲ್ಲಿ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಜನರ ಜನಹೀವನದಲ್ಲಿ ಹಾಸುಹೊಕ್ಕಾಗಿದೆ.ಹಾಗಾಗಿ ಅಡಿಕೆಯ ನಾನಾ ಉಪಯೋಗಗಳ ಅನ್ವೇಷಣೆಗಾಗಿ ಮತ್ತು ಅಡಿಕೆಗೆ ಬಾಧಿಸುತ್ತಿರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಸಾಕಷ್ಟು ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರವನ್ನು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ರೈತರ ಪರವಾಗಿ ಮನವಿ ಮಾಡಿರುವುದಾಗಿ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







