ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಮಳೆ; ವಿವಿಧೆಡೆ ಮನೆ ಹಾಗೂ ಕೃಷಿ ಹಾನಿ

ಬಂಟ್ವಾಳ : ತಾಲೂಕಿನಾದ್ಯಂತ ಮಳೆ ಬಿರುಸಿನಿಂದ ಮುಂದುವರಿದಿದ್ದು, ವಿವಿಧೆಡೆಗಳಲ್ಲಿ ಮನೆ, ಕೃಷಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಬಿ.ಸಿ.ರೋಡಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಪರಿಸರದಲ್ಲಿ ಎಲ್ಲೂ ವಿದ್ಯುತ್ ಸರಬರಾಜು ಇಲ್ಲದೆ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ.
ಬಂಟ್ವಾಳ ಪೋಲೀಸ್ ಉಪ ವಿಭಾಗದ ಕಚೇರಿಯ ಮಾಡಿನ ಮೇಲೆ ತೆಂಗಿನ ಮರ ಬಿದ್ದು ಅಪಾರ ನಷ್ಟವುಂಟಾಗಿದೆ. ಡಿ.ವೈ.ಎಸ್.ಪಿ ವಿಜಯಪ್ರಸಾದ್ ಅವರು ಕುಳಿತುಕೊಳ್ಳುವ ಕೊಠಡಿ ಮೇಲೆ ಕಚೇರಿಯ ಅಂಗಳದಲ್ಲಿದ್ದ ಹಳೆಯ ತೆಂಗಿನ ಮರ ಬಿದ್ದು ಹಂಚು ಹುಡಿಯಾಗಿದೆ. ಅದೃಷ್ಟವಶಾತ್ ಡಿ.ವೈ.ಎಸ್.ಪಿ.ಯವರು ಕಚೇರಿಯಿಂದ ಕೆಲವೇ ಕ್ಷಣದ ಹಿಂದೆ ಹೊರಟು ಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ. ಇದೀಗ ಡಿ.ವೈ.ಎಸ್.ಪಿ.ಕಚೇರಿಯ ದುರಸ್ತಿ ಕಾರ್ಯ ಕೂಡಾ ಭರದಿಂದ ಸಾಗುತ್ತಿದೆ.
ಪುದು ಗ್ರಾಮದ ಜಯಶ್ರೀ ಕೋಂ ವಾಮನ ಇವರ ಮನೆಗೆ ಹೊಂದಿದ ಬರೆ ಕುಸಿದಿದ್ದು ಮನೆ ತಳ ಕುಸಿಯುವ ಹಂತ ದಲ್ಲಿದೆ, ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಅರುಣ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ ವೀರಕಂಭ ಗ್ರಾಮದ ಮಂಗಲಪದವು ಎಂಬಲ್ಲಿ ಶಂಕರ ಕೊರಗ ರವರ ಮನೆ ಗೋಡೆ ಬಿರುಕು ಬಿಟ್ಟಿದ್ದು ತೀವ್ರ ಹಾನಿಯಾಗಿರುತ್ತದೆ, ಮೇರಮಜಲು ಗ್ರಾಮದ ಬಡ್ಡೂರು ಕಾನ ಜುಲಿಯಾನ ಡಿಸೋಜ ಕೋಂ ದಿ. ಸಾಲ್ವದೋರ್ ಡಿ ಸೋಜ ರ ಮನೆಗೆ ಹೊಂದಿದ ಬರೆ ಕುಸಿದು ಬಿದ್ದಿದ್ದು ಮನೆ ತಳ ಕುಸಿಯುವ ಹಂತದಲ್ಲಿದೆ, ಮೇರಮಜಲು ಗ್ರಾಮದ ಲಾರೆನ್ಸ್ ಡಿಸೋಜ ರವರ ಮನೆ ಗೋಡೆ ಹಾಗೂ ಹಂಚು ಪೂರ್ತಿ ಹಾನಿಯಾಗಿರುತ್ತದೆ, ಮೇರಮಜಲು ಗ್ರಾಮದ ಮೇರಿ ಬ್ರಾಗ್ ರವರ ತೋಟ ಅಡಿಕೆ ಕೃಷಿ ಹಾನಿಯಾಗಿರುತ್ತದೆ, ಮೇರಮಜಲು ಗ್ರಾಮದ ವಿಲಿಯಂ ಲ್ಯಾನ್ಸಿ ಪಿರೇರಾ ರವರ 60 ಅಡಿಕೆ ಮರ 40 ಬಾಳೆ ಗಿಡ ಕೃಷಿ ಹಾನಿಯಾಗಿದೆ, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಿ ಮೂಲೆ ನಿವಾಸಿಯಾದ ಮೀನಾಕ್ಷಿ ಕೊಂ ನಾರಾಯಣ ನಾಯ್ಕ ಇವರು ವಾಸ್ತವ್ಯವಿರುವ ಮನೆಯ ಒಂದು ಪಾಶ್ವಕ್ಕೆ ಮರ ಬಿದ್ದು ಹಾನಿಯಾಗಿರುತ್ತದೆ, ಪುಣಚ ಗ್ರಾಮದ ಮೂಡಂಬೈಲು ಎಂಬಲ್ಲಿ ಸರೋಜಿನಿ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ, ಅಮ್ಮುಂಜೆ ಗ್ರಾಮದ ಪ್ರೇಮಲತಾ ಎಂಬವರ ಮನೆಗೆ ಹೊದಿಕೊಂಡಿರುವ ಕೊಠಡಿಯ ಗೋಡೆ ಕುಸಿದಿರುತ್ತದೆ ಆದರೆ ಎಲ್ಲೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.







