ಸುರತ್ಕಲ್: ಪುತ್ತಿಗೆ ರಘುರಾಮ ಹೊಳ್ಳಗೆ "ಅಗರಿ ಪ್ರಶಸ್ತಿ" ಪ್ರದಾನ

ಸುರತ್ಕಲ್: ಯುವಚೇತನ ಹೊಸಬೆಟ್ಟು ಕುಳಾಯಿ ಇದರ 31ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣೆ ವೇದಿಕೆ ಸುರತ್ಕಲ್ ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಅಗರಿ ಪ್ರಶಸ್ತಿ, ಅಗರಿ ರಘುರಾಮ ಸಮ್ಮಾನ, ಅಗರಿ ಸಂಸ್ಮರಣೆ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ರವಿವಾರ ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಅವರು, ಅಗರಿ ಶ್ರೀನಿವಾಸ ಭಾಗವತಋು ಒಂದು ರಾತ್ರಿ ಬೆಳಗಾಗುವುದರೊಳಗಾಗಿ ಒಂದು ಇಡೀ ಪ್ರಸಂಗವನ್ನು ಬರೆದವರು. ಅವರ ಪಾಂಡಿತ್ಯ, ನೈಪುಣ್ಯತೆಯ ಜೊತೆ ದೈವೀಬಲವಿತ್ತು. ಅವರು ಕವಿಯಾಗಿ, ಸಂಗಸ್ಥಳದ ನಿರ್ದೇಶಕರಾಗಿ ಯಕ್ಷಗಾನದ ತಪ್ಪುಗಳನ್ನು ಎಲ್ಲಿಯೂ ಶಕ್ತರೀತಿಯಲ್ಲಿ ಹೇಳಬಲ್ಲ ಧಿಮಂತರಾಗಿದ್ದರು. ಅವರು ಭಾಗವತಿಕೆಯಲ್ಲಿ ಅವರದೇ ಶೈಲಿಯನ್ನು ಹುಟ್ಟುಹಾಕಿ ಯಕ್ಷಗಾನದಲ್ಲಿ ಸಾಧನೆ ತೋರಿದವರು. ಈ ದಿನಗಳಲ್ಲಿ ಅಗರಿ ಭಾಗವತರ ಶೈಲಿ ಅನುಕರಿಸುವುದು ಕಷ್ಟವೇ ಸರಿ ಎಂದು ನುಡಿದರು.
ಪ್ರಾಸ್ತಾವಿಕ ಮಾತನಾಡಿದ ಅಗರಿ ರಾಘವೇಂದ್ರ ರಾವ್, ಅಗರಿ ಶ್ರೀನಿವಾಸ ಭಾಗವತರು ಬರೆದಿರುವ ಶ್ರೀದೇವಿ ಮಹಾತ್ಮೆ ಪ್ರಸಂಗ ಜಗತ್ ಪ್ರಖ್ಯಾತಗೊಂಡಿದ್ದರೂ ಎಲ್ಲಿಯೂ ಪ್ರಸಂಗ ವಿರಚಿತರ ಹೆಸರು ಪ್ರಸ್ತಾಪ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಅಗರಿ ಶ್ರೀನಿವಾಸ ಭಾಗವತರ ವಿರಚಿತ ಪ್ರಸಂಗಗಳನ್ನು ಆಡಿಸುವಾಗ ಅವರ ಹೆಸರು ಸ್ಮರಿಸಿಕೊ ಳ್ಳುವ ಮೂಲಕ ಅವರ ಸಾಧನೆಯನ್ನು ಕೊಂಡಾಡುವಂತಗಬೇಕು. ಜೊತೆಗೆ ಗಿನ್ನೀಸ್ ದಾಖಲೆ ನಿರ್ಮಿಸುವಂತಾಗಬೇಕು ಎಂದು ಅಭಿಪ್ರಾಯಿಸಿದರು.
ಇದೇ ಸಂದರ್ಭ ಅಭಿಜ್ಞ ಯಕ್ಷಗಾನ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ 2023ನೇ ಸಾಲಿನ ಪ್ರತಿಷ್ಠಿತ ಅಗರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಅಗರಿ ರಘುರಾಮ ಸಮ್ಮಾನ ಪುರಸ್ಕಾರವನ್ನು ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆ ಯಕ್ಷಗಾನ ಕಲಾರಂಗ(ರಿ)ಗೆ ಅತಿಥಿಗಳು ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಅಗರಿ ಸಂಸ್ಮರಣೆಯನ್ನು ಭರತನಾಟ್ಯ ಮತ್ತು ಯಕ್ಷಗಾನ ಕಲಾವಿದೆ ವಿದುಷಿ ಸಮಂಗಳಾ ರತ್ನಾಕರ ನಡೆಸಿಕೊಟ್ಟರು. ಅಭಿನಂದನಾ ಭಾಷಣವನ್ನು ಉಪನ್ಯಾಸಕರು ಹಾಗೂ ಯಕ್ಷಗಾನ ಕಲಾವಿದ ವಾದಿರಾಜ ಕಲ್ಲೂರಾಯ ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯಾಸ್‌ನ ಶ್ರೀಪತಿ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಕಾಂತ ಭಟ್, ಗುರುರಾಜ ಆಚಾರ್ಯ ಹೊಸಬೆಟ್ಟು, ರಮೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.







