ಪರಸ್ಪರ ಸಂಸ್ಕೃತಿಗಳನ್ನು ಅರಿತಾಗ ಬಲಿಷ್ಟ ಭಾರತ ನಿರ್ಮಾಣ: ಸ್ಪೀಕರ್ ಯು.ಟಿ.ಖಾದರ್
ಮಂಗಳೂರಿನಲ್ಲಿ ಬಹುಸಂಸ್ಕೃತಿ ಉತ್ಸವ

ಮಂಗಳೂರು: ಸಮಾಜದಲ್ಲಿ ಪ್ರೀತಿ, ವಿಶ್ವಾಸದ ವಾತಾವರಣ ಕಡಿಮೆಯಾಗಿ ಪರಸ್ಪರರನ್ನು ಸಂಶಯದಿಂದ ನೋಡುವ ಈಗಿನ ಕಾಲಘಟ್ಟದಲ್ಲಿ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುವ ಈ ಕಾರ್ಯಕ್ರಮಗಳ ಮೂಲಕ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ, ದ.ಕ. ಉಡುಪಿ ಮತ್ತು ಕೊಡಗು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾದ ಬಹುಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿದರು.
ಅಕಾಡೆಮಿಗಳು ಬಹುತೇಕವಾಗಿ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಆದರೆ ಇದೇ ಮೊದಲ ಬಾರಿಗೆ ಆರು ಅಕಾಡೆಮಿಗಳು ಜತೆಯಾಗಿ ಬಹು ಸಂಸ್ಕೃತಿ ಉತ್ಸವದ ಮೂಲಕ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಿದೆ. ಸೌಹಾರ್ದತೆ, ಸಹೋದರತೆಯ ಸಮಾಜ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು, ಅಕಾಡೆಮಿಗಳ ಜತೆಗೆ ಪ್ರತಿ ಪೋಷಕರ ಜವಾಬ್ಧಾರಿಯೂ ಇದೆ ಎಂದು ಹೇಳಿದರು.
ಹೊರ ದೇಶಗಳಲ್ಲಿ ವರ್ಷದಲ್ಲಿ ಒಂದೆರಡು ಹಬ್ಬಗಳನ್ನು ಮಾತ್ರ ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಪ್ರತಿದಿನವೂ ಹಬ್ಬವೇ. ಉತ್ಸವಗಳು ನಮ್ಮ ವ್ಯಕ್ತಿತ್ವ ಬೆಳೆಸಲು ಸಾಕಷ್ಟು ಸಹಕಾರಿಯಾಗುತ್ತವೆ. ಕಲೆ, ಸಂಸ್ಕೃತಿನ್ನು ಉತ್ಸವಕ್ಕಷ್ಟೇ ಸೀಮಿತಗೊಳಿಸದೆ ಯುವಕರಿಗೆ ಅದನ್ನು ಹಿರಿಯರು ಅರ್ಥೈಸಬೇಕು. ಇಂತಹ ಉತ್ಸವಗಳಲ್ಲಿ ಪೋಷಕರೂ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಮಹೇಶ್ ನಾಚಯ್ಯ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಉಡುಪಿ ಎಸ್ಪಿ ಡಾ.ಅರುಣ್ ಮತ್ತಿತರರಿದ್ದರು.
‘ಕರ್ನಾಟಕಕ್ಕೆ ಒಡನಾಡಿ ಭಾಷಾ ಸಮುದಾಯಗಳ ಕೊಡುಗೆ’ ಎಂಬ ವಿಷಯದಲ್ಲಿ ಆಯ್ದ ವಿದ್ಯಾರ್ಥಿಗಳು ವಿಚಾರ ಮಂಡಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನಿರೂಪಿಸಿದರು. ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಉತ್ಸವಾಗಿ ಅಂಗವಾಗಿ ಮೂರು ಜಿಲ್ಲೆಗಳ ಶಾಲಾ ಕಾಲೇಜು ಮಕ್ಕಳಿಗಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಹುಸಂಸ್ಕೃತಿ ಉತ್ಸವದಲ್ಲಿ ಸಾಂಸ್ಕೃತಿಕ ವೈವಿಧ್ಯತೆಯ ಅನಾವರಣ
ಬಹು ಸಂಸ್ಕೃತಿ ಉತ್ಸವದ ಅಂಗವಾಗಿ ಪುರಭವನದ ವೇದಿಕೆಯಲ್ಲಿ ವಿವಿಧ ಅಕಾಡೆಮಿಗಳ ತಂಡಗಳಿಂದ ಕರಾವಳಿಯ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು. ಕೊಂಕಣಿಯ ಬೈಲಾ ಹಾಡು ಹಾಗೂ ನೃತ್ಯ, ಕೊಡವರ ಉಮ್ಮತ್ತಾಟ್ ನೃತ್ಯ, ತುಳುವಿನ ಕೊರಗರ ಡೋಲು - ಕೊಳಲಿನ ನಿನಾದದೊಂದಿಗೆ ಕುಣಿತ, ಬ್ಯಾರಿ ಹುಡುಗರ ದಫ್, ದುಡಿ ಕುಣಿತ ದೊಂದಿಗೆ ಸುವರ್ಣ ಕರ್ನಾಟಕ ಸಂಭ್ರಮವನ್ನು ಬಿಂಬಿಸುವ ನೃತ್ಯಗಳು ಬೆಳಗ್ಗಿನಿಂದ ಸಂಜೆಯವರೆಗೂ ಪುರಭವನದ ವೇದಿಕೆಯಲ್ಲಿ ನಡೆಯಿತು. ಮೈಮ್ ರಾಮದಾಸ್‌ರವರ ತುಳು ಹಾಡುಗಳು, ಫಯಾಜ್‌ರವರ ಬ್ಯಾರಿ, ಝೀನಾರವರ ಬೈಲಾ ಹಾಗೂ ಜ್ಯೋತಿ ಜೋಗಿಯವರ ಜನಪದ ಹಾಡುಗಳು ಸಭಿಕರನ್ನು ರಂಜಿಸಿದವು.
ಮೋಡಿ ಮಾಡಿದ ಸಿದ್ಧಿ ಸಮುದಾಯದ ನೃತ್ಯ ವೈಭವ!
ನಗರದಿಂದ ದೂರವೇ ಉಳಿದಿರುವ, ಬಹುತೇಕವಾಗಿ ಕಾಡಿನಂಚಿನಲ್ಲಿಯೇ ವಾಸವಾಗಿರುವ ಸಿದ್ದಿ ಸಮುದಾಯದ ನೃತ್ಯ ನೋಡಲು ಸಿಗುವುದು ಅಪರೂಪ. ಪುರಭವನದ ವೇದಿಕೆಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಸಿದ್ಧಿ ಸಮುದಾಯ ತಂಡವು ಪ್ರದರ್ಶಿಸಿದ ನೃತ್ಯ ವೈಭವ ಸೇರಿದ್ದ ಶಾಲಾ ಕಾಲೇಜು ಮಕ್ಕಳ ಜತೆಗೆ ಪ್ರೇಕ್ಷಕರನ್ನು ನಿಬ್ಬೆರಗು ಗೊಳಿಸಿತು. ಮಡಕೆಯನ್ನು ಹೋಲುವ ‘ಗುಮ್ಮಟೆ’ ಡೋಲು ಬಾರಿಸಿಕೊಂಡು ಮೂವರು ಕಲಾವಿದರು ಹಾಡು ಹೇಳುತ್ತಿದ್ದರೆ, ಆಕರ್ಷಕ ಉಡುಗೆ ತೊಡುಗೆಗಳನ್ನು ತೊಟ್ಟ ಐದು ಮಂದಿ ಮಹಿಳೆಯರ ನೃತ್ಯ ನೋಡುಗರನ್ನು ಮೋಡಿಗೊಳಿಸಿತು.
‘ಬಹು ಸಂಸ್ಕೃತಿ ಉತ್ಸವ’ಕ್ಕೆ ಮುಖ್ಯಮಂತ್ರಿ ಗೈರು!
ಸುವರ್ಣ ಕರ್ನಾಟಕ ಸಂಭ್ರಮದ ಭಾಗವಾಗಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಆಯೋಜಿ ಸಲಾದ ಬಹು ಸಂಸ್ಕೃತಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗೈರು ಸಂಘಟಕರಿಗೆ ನಿರಾಸೆ ಮೂಡಿಸಿತು.
ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಯಕ್ಷಗಾನ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಸೇರಿ ಒಟ್ಟು ಆರು ಆಕಾಡೆಮಿಗಳ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಜಂಟಿ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಸಂಯೋಜಿಸಲಾಗಿತ್ತು. ಇದಕ್ಕಾಗಿ ವಿವಿಧ ಅಕಾಡೆಮಿಗಳು ಕಳೆದ ಸುಮಾರು ಎರಡು ತಿಂಗಳಿನಿಂದೀಚೆಗೆ ಸಿದ್ಧತೆಯನ್ನೂ ನಡೆಸಿವೆ. ಎರಡು ಬಾರಿ ಕಾರ್ಯ ಕ್ರಮ ಮುಂದೂಡಿಕೆಯಾಗಿ ಶುಕ್ರವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಉದ್ಘಾಟನೆಯೊಂದಿಗೆ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು.
ಬೆಳಗ್ಗೆ 10 ಗಂಟೆಯಿಂದಲೇ ಪುರಭವನದ ವೇದಿಕೆಯಲ್ಲಿ ವಿವಿಧ ಅಕಾಡೆಮಿಗಳ ತಂಡಗಳಿಂದ ಬಹು ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿತ್ತು. ಕಳೆದೆರಡು ದಿನಗಳ ಹಿಂದೆ ನಿಗದಿಯಾದಂತೆ ಪುರಭವನದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು 12.15ಕ್ಕೆ ಭೇಟಿ ನೀಡಿ ಉದ್ಘಾಟನೆ ನೆರವೇರಿ ಸಬೇಕಿತ್ತು. ಆದರೆ ಮಂಗಳೂರಿಗೆ ಮುಖ್ಯಮಂತ್ರಿ ಆಗಮನವೇ ಸುಮಾರು ಒಂದೂವರೆ ಗಂಟೆ ತಡವಾದ ಕಾರಣ ಮಧ್ಯಾಹ್ನ 1.30ರ ನಂತರವಾದರೂ ಭೇಟಿ ನೀಡಬಹುದೆಂಬ ನಿರೀಕ್ಷೆ ಸಂಘಟಕರದ್ದಾಗಿತ್ತು. ಪುರಭವನದ ಸುತ್ತಮುತ್ತ ಲೆಲ್ಲಾ ಭಾರೀ ಬಿಗಿ ಭದ್ರತೆ ಒದಗಿಸಲಾಗಿತ್ತು. ಪುರಭವನದ ಹೊರ ಆವರಣದಲ್ಲಿ ಮುಖ್ಯಮಂತ್ರಿಯವರಿಗೆ ಸ್ವಾಗತ ಕೋರಿ ಬೃಹತ್ ಸೆಲ್ಫಿ ಸ್ಟಾಂಡ್ ಕೂಡಾ ರಚಿಸಲಾಗಿತ್ತು. ಹೊರಗಡೆ ಬೃಹತ್ ಕೀಲು ಬೊಂಬೆಗಳನ್ನು ನಿಲ್ಲಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಶ್ವಾನ ದಳದದೊಂದಿಗೆ ಸುರಕ್ಷಾ ತಂಡ ಪುರಭವನದ ವೇದಿಕೆಯ ತಪಾಸಣೆಯನ್ನು ನಡೆಸಿತು. ಸಂಜೆ ಸುಮಾರು 3.45ರವರೆಗೆ ಮುಖ್ಯಮಂತ್ರಿಗಾಗಿ ಕಾರ್ಯಕ್ರಮ ಸಂಘಟಕರು ಎದುರು ನೋಡುತ್ತಿದ್ದರು. ಆದರೆ ಅದಾಗಲೇ ಪುರಭವನದ ಮುಖ್ಯಮಂತ್ರಿ ಭೇಟಿ ರದ್ದುಗೊಂಡಿತ್ತು.







