ರಾಷ್ಟ್ರೀಯ ಬೀದಿ ವ್ಯಾಪಾರ ದಿನಾಚರಣೆ ಅಂಗವಾಗಿ ಹಕ್ಕೊತ್ತಾಯ ಸಭೆ

ಮಂಗಳೂರು: ದೇಶದ ಬೀದಿ ವ್ಯಾಪಾರಿಗಳ ಐಕ್ಯತೆಯ ಹೋರಾಟದಿಂದ ಬೀದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾನೂನು ಜಾರಿಗೆ ಬಂದಿದೆ. ಆದರೆ ಸ್ಥಳೀಯಾಡಳಿತಗಳು ಅನುಷ್ಠಾನ ಮಾಡದೆ ಬೀದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ರಾಷ್ಟ್ರೀಯ ಬೀದಿ ವ್ಯಾಪಾರಿಗಳ ದಿನಾಚರಣೆಯ ಅಂಗವಾಗಿ ನಗರದ ಪುರಭವನದ ಬಳಿ ಮಂಗಳವಾರ ನಡೆದ ಬೀದಿ ವ್ಯಾಪಾರಿಗಳ ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಟೈಗರ್ ಕಾರ್ಯಚರಣೆಯ ವೇಳೆ 33 ವ್ಯಾಪಾರ ವಲಯ ಘೋಷಣೆ ಮಾಡಿದ್ದ ಬಿಜೆಪಿಯ ನಗರಾಡಳಿತ ಈಗ ಒಂದು ವಲಯ ಮಾಡಿರುವುದೇ ಸಾಧನೆ ಎಂದು ತನ್ನ ಬೆನ್ನನ್ನೇ ತಾನು ತಟ್ಟಿಕೊಳ್ಳುತ್ತಿದೆ ಎಂದು ಟೀಕೆಸಿದ ಅವರು ಮಂಗಳೂರಿನ ಬೀದಿ ವ್ಯಾಪಾರಿಗಳ ಚಳುವಳಿಗೆ 15 ವರ್ಷಗಳ ಸುಧೀರ್ಘ ಇತಿಹಾಸವಿದೆ. ಕೆಂಬಾವುಟ ಮಾತ್ರ ಮಂಗಳೂರಿನ ಬೀದಿ ವ್ಯಾಪಾರಿಗಳಿಗೆ ರಕ್ಷಣೆ ನೀಡಿದ್ದು ಹೋರಾಟ ಮತ್ತು ಸಂಘಟನೆಯಿಂದ ಮಾತ್ರ ನಮ್ಮ ಹಕ್ಕುಗಳ ರಕ್ಷಣೆ ಮಾಡಲು ಸಾಧ್ಯ ಎಂದರು.
ಮಂಗಳೂರಿನ ಲೇಡಿಹಿಲ್, ಮಣ್ಣಗುಡ್ಡೆ ಪರಿಸರದ ಬೀದಿ ಆಹಾರ ಮಾರಾಟಗಾರರ ಗೂಡಂಗಡಿಗಳ ಮೇಲೆ ಬುಲ್ದೊಜರ್ ಹಾಯಿಸಿ ಅವರ ಬದುಕನ್ನು ನಾಶ ಮಾಡಿದವರು. ಇಂದು ಅಸಹ್ಯವಾಗಿ ಟೀ ಮಾಡಿಕೊಡುವ ಡಾಲಿ ಚಾಯಿವಾಲನ್ನು ಕರೆಸಿ ಶುಚಿತ್ವ ಮತ್ತು ಗುಣಮಟ್ಟಕ್ಕೆ ಒತ್ತು ಕೊಡುವ ಮಂಗಳೂರಿಗರ ಪ್ರಜ್ಞಾವಂತಿಕೆಯನ್ನು ಶಾಸಕ ವೇದವ್ಯಾಸ ಕಾಮತ್ ಮತ್ತು ಬಿಜೆಪಿ ಮುಖಂಡರು ಹರಾಜಿಗಿಟ್ಟರು ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆರೋಪಿಸಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಮುಜಾಫರ್ ಅಹ್ಮದ್, ಮಾಜಿ ಅಧ್ಯಕ್ಷ ಹಸನ್ ಬೆಂಗ್ರೆ, ಉಪಾಧ್ಯಕ್ಷ ವಿಜಯ ಜೈನ್, ಮುಖಂಡರಾದ ಹಸನ್ ಕುದ್ರೋಳಿ, ಹಂಝ, ಸಿಕಂದರ್ ಬೇಗ್, ವಿಜಯ ಜೈನ್, ಕಾಜ ಮೊಹಿಯುದ್ದೀನ್, ಎಂಎನ್ ಶಿವಪ್ಪ, ಚಂದ್ರಶೇಖರ ಭಟ್, ಅಬ್ದುಲ್ ಖಾದರ್, ಮೇಬಲ್ ಡಿಸೋಜ, ಫಿಲೋಮಿನಾ, ಲೀನಾ ಡಿಸೋಜ, ಗುಡ್ಡಪ್ಪ, ಸಲೀಂ, ರಫೀಕ್, ಸಲಾಂ ಸುರತ್ಕಲ್, ಹನೀಫ್ ಇಡ್ಯಾ, ಹರೀಶ್ ಬೈಕಂಪಾಡಿ, ಹಕೀಮ್ ಸ್ಟೇಟ್‌ಬ್ಯಾಂಕ್, ಯಶೋಧರ ಬೈಕಂಪಾಡಿ, ಬಾಲಕೃಷ್ಣ ಸುರತ್ಕಲ್, ಹನೀಫ್ ಬೆಂಗ್ರೆ, ಮುತ್ತುರಾಜ್, ಖಾದರ್ ವಾಮಂಜೂರ್, ನೌಷಾದ್ ಕಣ್ಣೂರು ಉಪಸ್ಥಿತರಿದ್ದರು.







